ಯುವರತ್ನ ನೋಡಲು ನೂಕನುಗ್ಗಲು ಲಾಠಿಚಾರ್ಜ್

ಹೊಸಪೇಟೆ,ಏ.೧- ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಯುವರತ್ನ ಇಂದು ಬಿಡುಗಡೆಯಾಗಿದ್ದು ಚಿತ್ರ ನೋಡಲು ಅಭಿಮಾನಿಗಳು ನೂಕುನುಗ್ಗಲು ಉಂಟಾಗಿದ್ದರಿಂದ ಅವರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ೪ ಚಿತ್ರಮಂದಿರದಲ್ಲಿ ಯುವರತ್ನ ಚಿತ್ರ ಬಿಡುಗಡೆಯಾಗಿದ್ದು ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಬೆಳಗ್ಗೆ ೫ ಗಂಟೆಯಿಂದಲೇ ಚಿತ್ರ ಪ್ರದರ್ಶನ ಆರಂಭವಾಗಿದ್ದು ಚಿತ್ರ ನೋಡಲು ಆಗಮಿಸಿದ ಅಭಿಮಾನಿಗಳು ಟಿಕೆಟ್ ಪಡೆಯಲು ನೂಕು ನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಬಾಲ ಚಿತ್ರಮಂದಿರದಲ್ಲಿ ಬೆಳಗ್ಗೆ ೬ ಗಂಟೆಗೆ ಸರಸ್ವತಿ ಹಾಗು ಲಕ್ಷ್ಮಿ ಚಿತ್ರಮಂದಿರದಲ್ಲಿ ಬೆಳಗ್ಗೆ ೭ಗಂಟೆಯಿಂದಲೇ ಮೊದಲ ಪ್ರದರ್ಶನ ಆರಂಭವಾಗಿದ್ದು ಮೊದಲ ಶೋ ನೋಡಲು ಅಭಿಮಾನಿಗಳು ಪೊಲೀಸರಿಂದ ಲಾಠಿ ಏಟು ತಿಂದಿದ್ದಾರೆ.
ಮೊದಲ ಪ್ರದರ್ಶನದಲ್ಲಿ ಚಿತ್ರ ವೀಕ್ಷಿಸಬೇಕು ಎನ್ನುವ ಉತ್ಸಾಹದಲ್ಲಿದ್ದ ಪುನೀತ್ ರಾಜಕುಮಾರ್ ಅಭಿಮಾನಿಗಳು ರಾತ್ರಿ ೧ ಗಂಟೆಯಿಂದ ಚಿತ್ರಮಂದಿರದ ಮುಂದೆ ಜಮಾಯಿಸಿದ್ದರು.
ಪುನೀತ್ ರಾಜಕುಮಾರ್ ಅವರ ಕಟೌಟ್ ಗೆ ಹಾರ ಹಾಕಿ ಅಭಿಷೇಕ ಮಾಡುತ್ತಿದ್ದ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಾ ಸಾಗಿತು. ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಚಿತ್ರಮಂದಿರದ ಬಳಿ ಅವರನ್ನು ನಿಯಂತ್ರಿಸುವುದು ಪೊಲೀಸರಿಗೆ ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಲಾಠಿ ಚಾರ್ಜ್ ಮಾಡಿ ಅವರನ್ನು ಚದುರಿಸುವ ಕೆಲಸ ಮಾಡಿದರು.
ಬೆಳಗ್ಗೆ ೫ ಮತ್ತು ೬ ಗಂಟೆಯಿಂದಲೇ ಕೆಲವೆಡೆ ಚಿತ್ರ ಪ್ರದರ್ಶನ ಆರಂಭವಾದ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಬೆಳಗಿನ ಉಪಹಾರ ವ್ಯವಸ್ಥೆಯನ್ನು ಕೂಡ ಕೆಲವು ಕಡೆ ಮಾಡಲಾಗಿತ್ತು