ಯುವಪೀಳಿಗೆಗೆ ದೇಶಾಭಿಮಾನ, ತಾತ್ರಿಕತೆ ಅವಶ್ಯಕ: ಕುಲಪತಿ ಸತ್ಯನಾರಾಯಣ್

ಕಲಬುರಗಿ.ಸೆ.15: ಯುವ ಪೀಳಿಗೆಗೆ ದೇಶಾಭಿಮಾನ ಹಾಗೂ ತಾಂತ್ರಿಕತೆ ಅವಶ್ಯಕವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಸತ್ಯನಾರಾಯಣ್ ಅವರು ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿ ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಜಯಂತ್ಯುತ್ಸವ ಮತ್ತು ಇಂಜಿನಿಯರ್ಸ್ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ರಕ್ತದಾನ ಮತ್ತು ನೇತ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಪೀಳಿಗೆಯಲ್ಲಿ ದೇಶಾಭಿಮಾನ ಮತ್ತು ತಾಂತ್ರಿಕಕತೆಯ ಅವಶ್ಯಕತೆ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಇಂಜಿನಿಯರ್‍ಗಳ ಪಾತ್ರ ಮತ್ತು ಈ ವಿಷಯಗಳಲ್ಲಿ ವಿಶ್ವೇಶ್ವರಯ್ಯನವರ ಪಾತ್ರವನ್ನು ಹೊಗಳಿ ಯುವ ಇಂಜನಿಯರ್‍ಗಳನ್ನು ಹುರಿದುಂಬಿಸಿದರು.
ಡಾ. ಶಂಭುಲಿಂಗಪ್ಪಾ ಅವರು ಪ್ರಾಸ್ರಾವಿಕವಾಗಿ ಮಾತನಾಡಿ, ವಿಶ್ವೇಶ್ವರಯ್ಯ ನವರ ಜೀವನದ ಘಟನೆಗಳು ಹಾಗೂ ಕೊಡುಗೆಗಳನ್ನು ಸವಿಸ್ತಾರವಾಗಿ ವಿವರಿಸಿ ಅವರು ನಡೆದು ಬಂದ ದಾರಿಯಲ್ಲಿ ನಾವುಗಳು ಮುಂದುವರಿಯಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಬಸವರಾಜ್ ಗಾದಗೆ ಅವರು ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಯುವಕರ ಪಾತ್ರ ಅದರಲ್ಲೂ ಇಂಜಿನಿಯರ್‍ಗಳ ಪಾತ್ರ ಬಹಳ ಮುಖ್ಯವಾಗಿದೆ. ನಾವು ಯಾವಾಗಲು ತೆಗೆದು ಕೊಳ್ಳುವುದರಲ್ಲಿ ತೊಡಗಿಸಿಕೊಂಡಿರುತ್ತೆವೆ ಆದರೆ ಮಾನವತೆಯನ್ನು ರೂಡಿಸಿಕೊಳ್ಳಬೇಕಾದರೆ ಮೊದಲು ಕೊಡುವ ಗುಣವನ್ನು ಬೆಳೆಸಿಕೊಂಡು ಮಾನವತಾವಾದವನ್ನು ಸಾರಬೇಕು. ರಕ್ತದಾನ ಮತ್ತು ನೇತ್ರದಾನದ ಅವಶ್ಯತೆ ಇದ್ದು, ದಾನ ಮಾಡಲು ಮುಂದೆ ಬರುವಂತೆ ಕರೆ ನೀಡಿದರು.
ವಿಶೇಷ ಉಪನ್ಯಾಸಕರಾಗಿದ್ದ ಖ್ಯಾತ ನೇತ್ರ ತಜ್ಞೆ ಡಾ. ಸಂಗೀತಾ ಪಾಟೀಲ್ ಅವರು ಮಾತನಾಡಿ, ನೇತ್ರದಾನ ಹಾಗೂ ರಕ್ತದಾನದ ಮಹತ್ವದ ತಿಳುವಳಿಕೆ ನೀಡಿ ಜನರಲ್ಲಿರುವ ಮೂಢನಂಬಿಕೆಗಳಿಗೆ ತೆರೆಎಳೆಯಬೇಕು ಹಾಗೂ ನೇತ್ರದಾನ ಹಾಗೂ ರಕ್ತದಾನದ ಸಾಧಕ ಭಾದಕಗಳನ್ನು ವಿವರಿಸಿದರು.
ಉದ್ಯಮಿ ಅರುಣಕುಮಾರ್ ಲೋಯಾ ಅವರು ಮಾತನಾಡಿ, ಯುವ ಜನತೆಯಲ್ಲಿ ವಿಶ್ವೇಶ್ವರಯ್ಯ ನವರ ಗುಣಗಳ ಅಳವಡಿಕೆ ಅವಶ್ಯವಾಗಿದೆ ಎಂದು ತಿಳಿಸಿದರು. ರವೀಂದ್ರ ಶಾಬಾದಿ ಅವರು ವಂದಿಸಿದರು. ಸಂಚಾಲಕ ಜಿ.ಎಸ್. ಪದ್ಮಾಜಿ, ಶಿವರಾಜ್ ಅಂಡಗಿ, ಡಾ. ಶರಣಗೌಡ ಬಿರಾದಾರ್, ಪ್ರಿನ್ಸಿಪಾಲ್ ಡಾ. ಖಾದ್ರಿ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರಿ ಅಂಬಿಕಾ ಪ್ರಾರ್ಥನಾಗೀತೆ ಹಾಡಿದರು. ಡಾ. ಕೆ. ಶಿವರಾಮನಗೌಡ ಅವರು ಕಾರ್ಯಕ್ರಮ ನಿರೂಪಿಸಿದರು.