ನಾಲ್ವರ ಸೆರೆ
ಬೆಂಗಳೂರು,ಮಾ.೩೧- ಉದ್ಯಾನನಗರಿ ಬೆಂಗಳೂರಿನಲ್ಲಿ ಪಾರ್ಕ್‌ನಲ್ಲಿ ಕುಳಿತಿದ್ದ ಯುವತಿಯನ್ನು ಹೊತ್ತೊಯ್ದು ದುರುಳರು ಚಲಿಸುತ್ತಿದ್ದ ಕಾರಿನಲ್ಲಿಯೇ ೮ ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಇದು ಬೆಂಗಳೂರು ಜನತೆಯನ್ನು ಬಿಚ್ಚಿಬೀಳಿಸಿದೆ. ಬೆಂಗಳೂರು ನಗರ ಯುವತಿಯರಿಗೆ ಸುರಕ್ಷಿತವಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ಈ ಅಮಾನುಷಕೃತ್ಯವೆಸಗಿ ಮುಂಜಾನೆ ೪ ಗಂಟೆ ಸಮಯದಲ್ಲಿ ಮನೆಯ ಮುಂದೆ ಕಾಮುಕರು ಬಿಟ್ಟು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ರಾಜಧಾನಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿಯೇ ನಿರ್ಭಯ ಅತ್ಯಾಚಾರ ಪ್ರಕರಣ ಇನ್ನು ಜನ ಮಾನಸದಿಂದ ಮಾಸಿಲ್ಲ. ಇದೀಗ ಬೆಂಗಳೂರಿನಲ್ಲೇ ಇಂತಹ ಪೈಶಾಚಿಕಕೃತ್ಯ ನಡೆದಿದೆ.ಕೋರಮಂಗಲದ ಎನ್‌ಜಿವಿ ಕಾಂಪ್ಲೆಕ್ಸ್ ಪಾರ್ಕ್‌ನಿಂದ ಸ್ನೇಹಿತನೊಂದಿಗೆ ಮಾತನಾಡುತ್ತಾ ಕುಳಿತಿದ್ದ ಯುವತಿಯನ್ನು ಬೆದರಿಸಿ ಅಪಹರಿಸಿ ಕರೆದೊಯ್ಯುತ್ತಿದ್ದ ಕಾರಿನಲ್ಲಿಯೇ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ ಹೀನಕೃತ್ಯ ನಡೆಸಿದ್ದಾರೆ.
ಮಾರುತಿ ೮೦೦ ಕಾರಿನಲ್ಲಿ ಹತ್ತಿಸಿಕೊಂಡ ಯುವತಿಯನ್ನು ಕೋರಮಂಗಲದ ಎನ್‌ಜಿವಿ ಕಾಂಪ್ಲೆಕ್ಸ್ ಪಾರ್ಕ್‌ನಿಂದ ದುರುಳರು ದೊಮ್ಮಲೂರು, ಇಂದಿರಾನಗರ, ಆನೇಕಲ್, ನೈಸ್ ರಸ್ತೆಗಳಲ್ಲಿ ಸುತ್ತಾಡಿ ದಾರಿಯುದ್ದಕ್ಕೂ ಸಂತ್ರಸ್ತೆಯ ಮೇಲೆ ಒಬ್ಬರಾದ ಮೇಲೆ ಒಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಸಂತ್ರಸ್ಥೆ ಆಸ್ಪತೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಹೀನಕೃತ್ಯ ನಡೆದ ಎರಡು ದಿನಗಳ ಬಳಿಕ ಸುಧಾರಿಸಿಕೊಂಡು ಕೋರಮಂಗಲ ಪೋಲಿಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ದೂರಿನ್ವಯ ಕಾರ್ಯಾಚರಣೆ ನಡೆಸಿದ ಪೋಲಿಸರು ಸತೀಶ್, ವಿಜಯ್, ಶ್ರೀಧರ್, ಕಿರಣ್ ಅವರನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.ಪ್ರಾಥಮಿಕ ತನಿಖೆ ವೇಳೆ ಎಲ್ಲ ಆರೋಪಿಗಳು ಒಂದೇ ಪ್ರದೇಶದವರಾಗಿದ್ದು ಸಂತ್ರಸ್ತೆ ಯುವತಿಗೆ ಪರಿಚಯಸ್ಥರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಾಲ್ವರು ಕೋರಮಂಗಲ ಪೋಲಿಸ್ ಕಸ್ಟಡಿಯಲ್ಲಿಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.