ಯುವತಿ ಮೇಲೆ ಅತ್ಯಾಚಾರ

ಕಲಬುರಗಿ,ಜೂ.27-ಬಿ.ಇ.ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ಇಲ್ಲಿನ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದ ಅಣ್ಣಾರಾವ ಅಲಿಯಾಸ್ ಆನಂದ ಜಮಾದಾರ ಎಂಬಾತನೆ ಅತ್ಯಾಚಾರವೆಸಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ.
ಯುವತಿ ತಾಯಿ ಜೊತೆ ಹರ್ಬಲ್ ನ್ಯೂಟ್ರಿಷನ್ ಕೇಂದ್ರಕ್ಕೆ ಹೋಗುವಾಗ ಆರೋಪಿ ಅಣ್ಣಾರಾವ ಪರಿಚಯವಾಗಿದ್ದ. ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರವೆಸಗಿ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಹುಮನಾಬಾದಗೆ ಹೋಗಿ ಅಲ್ಲಿಂದ ಕರೆ ಮಾಡಿ ಹುಮನಾಬಾದಗೆ ಬರದೇ ಹೋದರೆ ಕೊಲ್ಲುವುದಾಗಿ ಹೆದರಿಸಿ ಅಲ್ಲಿಗೆ ಕರೆಸಿಕೊಂಡು ಲಾಡ್ಜಗೆ ಕರೆದೊಯ್ದು ಅತ್ಯಾಚಾರವೆಸಗಿ ಮೊಬೈಲ್‍ನಲ್ಲಿ ಫೋಟೋ ತೆಗೆದಿದ್ದಾನೆ. ನಂತರ 3 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. 3 ಲಕ್ಷ ರೂ. ನೀಡದೇ ಹೋದರೆ ತನ್ನೊಂದಿಗಿರುವ ಫೋಟೋಗಳನ್ನು ಗೆಳತಿಯರಿಗೆ ಕಳುಹಿಸುವುದಾಗಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.