ಯುವತಿಯರಿಗೆ ಮುತ್ತಿಕ್ಕಿ ಪರಾರಿಯಾಗುತ್ತಿದ್ದ ಕಾಮುಕ ಸೆರೆ

ಬೆಂಗಳೂರು,ಅ.೧-ಒಂಟಿಯಾಗಿ ಓಡಾಡುವ ಯುವತಿಯರನ್ನೇ ಗುರಿಯಾಗಿಸಿ ಹಿಂಬಾಲಿಸಿ ಅವರ ಖಾಸಗಿ ಅಂಗ ಮುಟ್ಟಿ ಪರಾರಿಯಾಗುತ್ತಿದ್ದ ಖತರ್ನಾಕ್ ಕಾಮುಕನನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.
ವೈಯ್ಯಾಲಿ ಕಾವಲ್ ನ ಅಯ್ಯಪ್ಪ ಬಂಧಿತ ಆರೋಪಿಯಾಗಿದ್ದಾನೆ. ಒಂಟಿ ಯುವತಿಯರನ್ನು ಹಿಂಬಾಲಿಸಿ ಯಾರು ಇಲ್ಲದ ಸಮಯ ನೋಡಿಕೊಂಡು ಅವರನ್ನು ಅಪ್ಪಿ ಅಸಹ್ಯವಾಗಿ ವರ್ತಿಸುತ್ತಿದ್ದ. ಯುವತಿಯ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕಾಮುಕನ ಮತ್ತಷ್ಟು ನೀಚ ಕೃತ್ಯಗಳು ಬೆಳಕಿಗೆ ಬಂದಿವೆ.
ರಾತ್ರಿ ಊಟ ಮುಗಿಸಿ ವಾಕ್ ಮಾಡುತ್ತಿದ್ದ ಯುವತಿಯನ್ನು ಕಂಡು ಬೈಕ್‌ನಲ್ಲಿ ದಿಢೀರನೇ ಪ್ರತ್ಯಕ್ಷವಾಗಿದ್ದ ಕಾಮುಕ ಅಯ್ಯಪ್ಪ, ಯುವತಿಯಿಂದ ಅಣತಿ ದೂರದಲ್ಲಿ ಬೈಕ್ ನಿಲ್ಲಿಸಿ ಆಕೆಯನ್ನು ಹಿಂಬಾಲಿಸಿ ಅಸಭ್ಯವಾಗಿ ಮುಟ್ಟಿ ಮುತ್ತಿಕ್ಕಿ ಯುವತಿ ಜೊತೆಗೆ ಕಿರಿಕ್ ತೆಗೆದು ಅಸಭ್ಯವಾಗಿ ವರ್ತಿಸಿದ್ದ. ಕಾಮುಕನ ಅಸಭ್ಯ ವರ್ತನೆ ಕಂಡು ಯುವತಿ ಕಿರುಚಾಡಿದಾಗ ಗಾಬರಿಗೊಂಡ ಕಾಮುಕ ಬೈಕ್‌ನಲ್ಲಿ ಪರಾರಿಯಾಗಿದ್ದ. ಈ ಘಟನೆ ವಸಂತನಗರದಲ್ಲಿ ನಡೆದಿದ್ದು ಘಟನೆ ಬಗ್ಗೆ ಯುವತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೈಯ್ಯಾಲಿ ಕಾವಲ್ ನಿವಾಸಿ ಅಯ್ಯಪ್ಪನನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕಾಮುಕನ ಮತ್ತಷ್ಟು ನೀಚ ಕೃತ್ಯಗಳು ಬೆಳಕಿಗೆ ಬಂದಿವೆ. ವರ್ಕ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಅಯ್ಯಪ್ಪ, ರಿಪೇರಿಗೆ ಬರುವ ಬೈಕ್ ತೆಗೆದುಕೊಂಡು ನಗರದಲ್ಲಿ ಸುತ್ತಾಡುತ್ತಿದ್ದ. ದಿನಕ್ಕೊಂದು ಬೈಕ್‌ನಲ್ಲಿ ರೌಂಡ್ಸ್ ಹಾಕುತ್ತಿದ್ದ. ಈ ವೇಳೆ ಒಂಟಿಯಾಗಿ ಯುವತಿಯರು ಕಂಡರೆ ಅವರನ್ನು ತಬ್ಬಿ, ಖಾಸಗಿ ಅಂಗ ಮುಟ್ಟಿ ಪರಾರಿಯಾಗುತ್ತಿದ್ದ. ಈ ರೀತಿ ಅನೇಕ ಬಾರಿ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ