ಯುವತಿಗೆ ಲೈಂಗಿಕ ಕಿರುಕುಳ: ವೃದ್ಧ ಸೆರೆ

ಬಂಟ್ವಾಳ, ಎ.೭- ಸೇಲ್ಸ್ ಕೆಲಸ ಮಾಡುತ್ತಿದ್ದ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸಿದ್ದಕಟ್ಟೆ ನಿವಾಸಿ ಎಸ್.ಎಚ್.ಅಬ್ದುಲ್ ರಹಮಾನ್(೭೨) ಎಂಬಾತನನ್ನು ಬಂಟ್ವಾಳ ಅಪರಾಧ ವಿಭಾಗದ ಎಸ್.ಐ.ಸಂಜೀವ ಅವರ ನೇತೃತ್ವದ ತಂಡ ಸಿದ್ದಕಟ್ಟೆ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ಬಂಧಿಸಿದ್ದಾರೆ. ಸಿದ್ದಕಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಕೆಲಸ ಮಾಡುತ್ತಿದ್ದ ಯುವತಿಗೆ ೭೨ ವರ್ಷ ವಯಸ್ಸಿನ ಅಬ್ದುಲ್ ರಹಮಾನ್ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಈ ಬಗ್ಗೆ ಬೇಸತ್ತ ಸಂತ್ರಸ್ತೆ ಯುವತಿ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದಳು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ಮಾಡಿದ ಗ್ರಾಮಾಂತರ ಪೋಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.