ಯುವಜನ ಸೇವೆಯೇ ನಿಜವಾದ ಪೂಜೆ: ದಯಾನಂದ

ಬೀದರ.ಏ.06: ಯುವಜನ ಸೇವೆ ಪ್ರಾಮಾಣಿಕವಾಗಿ ಮಾಡಿದ್ದಕ್ಕೆ ಭಗವಂತ ನನಗೆ ಈ ಸ್ಥಾನಕ್ಕೆ ತಂದಿರುವುದಾಗಿ ನೆಹರು ಯುವ ಕೇಂದ್ರ ಸಂಘಟನೆ ನೂತನ ರಾಜ್ಯ ನಿರ್ದೇಶಕರಾದ ಡಿ.ದಯಾನಂದ ತಿಳಿಸಿದರು.
ಮಂಗಳವಾರ ರಾಜ್ಯಧಾನಿ ಬೆಂಗಳೂರಿನಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಅವರಿಂದ ಸನ್ಮಾನಿತರಾಗಿ ಮಾತನಾಡಿದ ಅವರು, ನನ್ನ ನಾಲ್ಕು ದಶಕದ ಯುವಜನ ಸೇವೆಯಲ್ಲಿ ನಾನು ಮಾಡಿದ ಕಾರ್ಯಕ್ಕೆ ನನಗೆ ತೃಪ್ತಿ ಇದೆ ಎಂದರು.
ನನ್ನ ಜೀವನದಲ್ಲಿ ನಾನು ಆಂದುಕೊಂಡದನ್ನು ಸಾಧಿಸುತ್ತ ಬಂದಿದ್ದೇನೆ. ನನ್ನ ಉಳಿದ ಸೇವಾ ದಿನಗಳಲ್ಲಿ ರಾಜ್ಯದ ಯುವಜನರಿಗೆ ನವೀನ ಕಾರ್ಯಕ್ರಮಗಳನ್ನು ಆಯೊಜಿಸುವ ಇಂಗಿತ ವ್ಯಕ್ತಪಡಿಸಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ತಾವು ಈ ನಾಡಿನ ಗಡಿ ಜಿಲ್ಲೆಗಳಾದ ಬೀದರ್, ಕಲಬುರಗಿ, ವಿಜಯಪುರ, ಬಳ್ಳಾರಿ, ದಾವಣಗೆರೆ ಇತ್ಯಾದಿ ಕಡೆಗಳಲ್ಲಿ ಜಿಲ್ಲಾ ಯುವ ಸಮನ್ವಯಾಧಿಕಾರಿಯಾಗಿ ಸೇವೆ ಮಾಡಿದ ಸಂದರ್ಭದಲ್ಲಿ ನಮ್ಮಂಥ ನೂರಾರು ಯುವಕರಿಗೆ ಮಾರ್ಗದರ್ಶನ ಮಾಡಿ ಅವರಲ್ಲಿ ಸ್ಪೂರ್ತಿ ತುಂಬಿದಿರಿ, ನಿಮ್ಮ ಯುವ ಕಾಳಜಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲಿದ್ದು ನಿಮಗೆ ಭಗವಂತ ಅಯುರಾರೋಗ್ಯ ನೀಡಿ ಕರುಣಿಸಲಿ, ನಿಮ್ಮ ಉಳಿದ ಸೇವಾವಧಿಯಲ್ಲಿ ರಾಜ್ಯಕ್ಕೆ ಇನ್ನು ಹೆಚ್ಚಿನ ಕಾರ್ಯಕ್ರಮಗಳು ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಬೆಂಗಳೂರಿನವರೆ ಆದ ಪರಮೇಶ್ವರಯ್ಯ, ನೆಹರು ಯುವ ಕೇಂದ್ರ ಸಂಘಟನೆ ರಾಜ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.