
ಸಂಜೆವಾಣಿ ವಾರ್ತೆ
ಚಿತ್ರದುರ್ಗ, ಸೆ.8: ಕರ್ನಾಟಕ ರಾಜ್ಯದಲ್ಲಿ ಯುವಜನ ಆಯೋಗವನ್ನು ರಚನೆ ಮಾಡಬೇಕು ಎಂದು ಯುವಜನ ಆಯೋಗ ಹೋರಾಟ ಸಮಿತಿಯ ಸಂಚಾಲಕರಾದ ಅಜಯ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆ ಮತ್ತು ಮಕ್ಕಳ ಆಯೋಗ ಇದ್ದು, ಇದೇ ಮಾದರಿಯಲ್ಲಿ ಯುವ ಜನರಿಗಾಗಿ ಆಯೋಗವನ್ನು ರಚನೆ ಮಾಡುವುದು ಅಗತ್ಯವಾಗಿದೆ. ಇದರಲ್ಲಿ ಯುವಜನಕ್ಕೆ ಸಂಬಂಧಿಸಿದ ವಿವಿಧ ರೀತಿಯ ಸಮಸ್ಯೆ ಹಾಗೂ ಹಕ್ಕುಗಳನ್ನು ಪಡೆಯಲು ಅನುಕೂಲ ಆಗಲಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಯುವಜನ ಆಯೋಗ ರಚನೆಗೊಂಡಿದೆ. ಆದರೆ ಕರ್ನಾಟಕದಲ್ಲಿ ಯುವಜನ ಆಯೋಗವನ್ನು ರಚನೆ ಮಾಡುವಂತೆ ಕಳೆದ 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೆ ಇದೂವರೆಗೂ ಕೂಡ ರಚನೆ ಆಗಿಲ್ಲ ಎಂದು ದೂರಿದರು.ದೇಶದ ಬೆನ್ನೆಲುಬು ಯುವಜನತೆ ಎನ್ನುವ ಈ ಸಮಯದಲ್ಲಿ ಆಡಳಿತ ಪಕ್ಷಗಳು ಅವರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಯುವಜನರನ್ನು ಬಳಕೆ ಮಾಡಿಕೊಳ್ಳುವ ರಾಜಕೀಯ ಪಕ್ಷಗಳು ಅವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಯುವಜನತೆಗೆ ಆಯೋಗವನ್ನು ರಚನೆ ಮಾಡುವ ಮೂಲಕ ಅವರ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕಿದೆ ಎಂದು ಒತ್ತಾಯಿಸಿದರು.ಯುವಜನರ ಗೌರವಕ್ಕೆ ದಕ್ಕೆ ಬಾರದ ರೀತಿಯಲ್ಲಿ ಶೋಷಣೆ ಮುಕ್ತ ಸಮಾಜವನ್ನು ನಿರ್ಮಾಣ ಮಾಡಬೇಕಿದೆ. ಸಂವಿಧಾನ ದತ್ತವಾದ ಹಕ್ಕು ಮತ್ತು ಕರ್ತವ್ಯಗಳನ್ನು ಕಪಾಡಬೇಕಿದೆ ಎಂದು ಆಗ್ರಹಿಸಿದ ಅವರು ಆಯೋಗ ರಚನೆ ಮಾಡಬೇಕು ಎಂದು ಒತ್ತಾಯಿಸುವ ಸಲುವಾಗಿ ಮುಖ್ಯಮಂತ್ರಿಗಳನ್ನು ಶೀಘ್ರದಲ್ಲೇ ಭೇಟಿ ಮಾಡಲಾಗುವುದು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಪುರುಷೋತ್ತಮ, ಜಯಶ್ರೀ ಸೂರಯ್ಯ ಸೇರಿದಂತೆ ಇತರರು ಹಾಜರಿದ್ದರು.