ಯುವಜನೋತ್ಸವ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ: ಶೆಟ್ಟರ್

ಹುಬ್ಬಳ್ಳಿ,ಜ8 : ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಇದೇ ದಿ. 12 ರಂದು ಹಮ್ಮಿಕೊಳ್ಳಲಾದ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಾಗಿದ್ದು, ಇದು ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ, ಹೀಗಾಗಿ ಕಾಂಗ್ರೆಸ್ ಇದನ್ನು ವಿರೋಧಿಸುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ದಿ. 12 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 26 ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಇಂದು ಇಲ್ಲಿನ ರೈಲ್ವೆ ಮೈದಾನದಲ್ಲಿ ನಡೆದಿರುವ ಸಿದ್ಧತಾ ಕಾರ್ಯ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮದಲ್ಲಿ ಸುಮಾರು 25-30 ಸಾವಿರ ಯುವಕರು ಭಾಗಿಯಾಗಲಿದ್ದು, ದೇಶದ ವಿವಿಧ ರಾಜ್ಯಗಳಿಂದ 8 ಸಾವಿರ ಯುವಕರು ಆಗಮಿಸಲಿದ್ದಾರೆ. ಅವರಿಗೆ ಕಾರ್ಯಕ್ರಮದಲ್ಲಿ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಹುಬ್ಬಳ್ಳಿಯಲ್ಲಿ 2018 ರ ನಂತರದ ಮೋದಿಯವರ ಬೃಹತ್ ಕಾರ್ಯಕ್ರಮ ಇದಾಗಿದೆ ಎಂದರು.
ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮ ಕೇಂದ್ರದ ಕಾರ್ಯಕ್ರಮ ಆಗಿದ್ದು ಇದು ರಾಜ್ಯ ಸರ್ಕಾರ ಸಹಕಾರದೊಂದಿಗೆ ನಡೆಯುತ್ತಿದೆ. ಈಗಾಗಲೇ ಸಿದ್ದತೆ ಭರದಿಂದ ನಡೆದಿದ್ದು, ಜಿಲ್ಲಾಡಳಿತ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಗೋ ಬ್ಯಾಕ್ ಅಭಿಯಾನಕ್ಕೆ ಅರ್ಥವಿಲ್ಲ: ಪ್ರಧಾನಿ ನರೇಂದ್ರ ಮೋದಿ ಅವರು ಹು-ಧಾಕ್ಕೆ ಬರುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಗೋ-ಬ್ಯಾಕ್ ಮೋದಿ ಅಭಿಯಾನ ಆರಂಭಿಸಿದಕ್ಕೆ ಯಾವುದೇ ಅರ್ಥವಿಲ್ಲ, ಮುಂದಿನ 2-3 ತಿಂಗಳಲ್ಲಿ ಚುನಾವಣೆ ಬರುವ ಹಿನ್ನೆಲೆಯಲ್ಲಿ ಅವರಿಗೆ ಮಾಡಲು ಏನೂ ಕೆಲಸವಿಲ್ಲದೇ ಈ ರೀತಿಯಾಗಿ ಅಪಪ್ರಚಾರ ಮಾಡತ್ತಾರೆ ಎಂದು ಶೆಟ್ಟರ್ ಕಿಡಿಕಾರಿದರು.
ನೀರಿನ ಸಮಸ್ಯೆಗೆ ತ್ವರಿತ ಪರಿಹಾರ:
ಅವಳಿನಗರದ ನೀರಿನ ಸಮಸ್ಯೆಗೆ 10 ದಿನಗಳಲ್ಲಿ ಪರಿಹಾರ: ಹು-ಧಾ ಅವಳಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಅಧಿವೇಶನದಲ್ಲಿ ಧ್ವನಿ ಎತ್ತಿದ್ದೇನೆ. ಅಲ್ಲದೇ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದೇನೆ. ನಗರಾಭಿವೃದ್ಧಿ ಸಚಿವರು ಸ್ಪಂದಿಸಿದ್ದು ಪ್ರಧಾನಿಗಳ ಹುಬ್ಬಳ್ಳಿ ಕಾರ್ಯಕ್ರಮದ ನಂತರ ನಗರದಲ್ಲಿ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಮುಂದಾಗೋಣ ಎಂದು ತಿಳಿಸಿದ್ದಾರೆ. ಅದರಂತೆ ಚರ್ಚೆ ಮಾಡಿ ಮತ್ತೆ ಮುಂದಿನ ಕ್ರಮ ಕೈಗೊಳ್ಳಲು ತಿರ್ಮಾನ ಮಾಡಲಾಗುವುದು ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಈ ಸಂದರ್ಭದಲ್ಲಿ ವಿಪ ಸದಸ್ಯ ಪ್ರದೀಪ ಶೆಟ್ಟರ್, ಹು-ಧಾ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ, ಪೆÇೀಲಿಸ ಆಯುಕ್ತ ರಮಣ್ ಗುಪ್ತಾ, ಡಿಸಿಪಿ ಸಾಹಿಲ್ ಬಾಗ್ಲಾ, ಧಾರವಾಡ ಎಸ್.ಪಿ ಲೋಕೇಶ ಜಗಲಾಸ್ಕರ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.