ಕಲಬುರಗಿ:ಜೂ.27:ಎಐಡವೈಓದ 58ನೇ ಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಸಂಘಟನೆಯ ರಾಜ್ಯ ಸಮಿತಿಯ ನಿಯೋಗವೊಂದು ಅಖಿಲ ಭಾರತ ಉಪಾಧ್ಯಕ್ಷರಾದ ಡಾ. ಜಿ.ಶಶಿಕುಮಾರ್ ನೇತೃತ್ವದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ, ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ನಿರುದ್ಯೋಗ ಭತ್ಯೆ ನೀಡಿಕೆ ಯೋಜನೆಯ ಜಾರಿಗಾಗಿ ಅಭಿನಂದನೆ ಸಲ್ಲಿಸಿ, ಈ ನೀತಿಯನ್ನು ಹಲವು ವರ್ಷಗಳಿಂದ ನಿರುದ್ಯೋಗದಿಂದ ಪರಿತಪಿಸುತ್ತಿರುವ ಎಲ್ಲ ನಿರುದ್ಯೋಗಿಗಳಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿತು.
ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಐದು ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ 1,000ರೂ. ದುಬಾರಿ ಅರ್ಜಿ ಶುಲ್ಕವನ್ನು ನಿಗದಿ ಮಾಡಿರುವುದನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತಂದು, ಅದನ್ನು ವಾಪಸ್ಸು ಪಡೆಯುವಂತೆ ಮನವಿ ಸಲ್ಲಿಸಲಾಯಿತು. ಜೊತೆಯಲ್ಲಿ, ನೇಮಕಾತಿಗಾಗಿ ನಡೆಯುವ ಪ್ರವೇಶ ಪರೀಕ್ಷೆ ಬರೆಯಲು ಹೋಗುವ ನಿರುದ್ಯೋಗಿ ಯುವಕರಿಗೆ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಯಿತು.
ಈ ಸಂದರ್ಭದಲ್ಲಿ, ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ನೇಮಕಾತಿಯಲ್ಲಿನ ಭ್ರಷ್ಟಾಚಾರ ತಡೆಯಬೇಕು, ಯುವಜನರನ್ನು ದಾರಿ ತಪ್ಪಿಸುವ ವಿಚ್ಛಿದ್ರಕಾರಿ ಶಕ್ತಿಗಳನ್ನು ಮಟ್ಟಹಾಕಬೇಕು, ದ್ವೇಷದ ರಾಜಕಾರಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ನೇಮಕಾತಿಗಾಗಿನ ಎಲ್ಲಾ ತರಹದ ಅರ್ಜಿ ಶುಲ್ಕಗಳನ್ನು ಕೈಬಿಡಬೇಕು, ಯುವಜನತೆಯ ಸಾಂಸ್ಕೃತಿಕ ಅಧ:ಪತನಕ್ಕೆ ಕಾರಣವಾದ ಮಾಧ್ಯಮಗಳಲ್ಲಿನ ಅಶ್ಲೀಲತೆ, ಮದ್ಯ ಮಾದಕ ವಸ್ತುಗಳಿಗೆ ಕಡಿವಾಣ ಹಾಕಬೇಕು ಎಂಬ ಹತ್ತು ಬೇಡಿಕೆಗಳ ಆಗ್ರಹ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ನಿಯೋಗದೊಂದಿಗೆ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು, ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ಈ ನಿಯೋಗದಲ್ಲಿ ಎಐಡಿವೈಓ ರಾಜ್ಯಾಧ್ಯಕ್ಷರಾದ ಶರಣಪ್ಪ ಉದ್ಬಾಳ್, ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ರಾಜ್ಯ ಉಪಾಧ್ಯಕ್ಷರಾದ ಕೃಷ್ಣ, ರಾಜ್ಯ ಖಜಾಂಚಿ ಜಯಣ್ಣ, ರಾಜ್ಯ ಸಮಿತಿ ಸದಸ್ಯರಾದ ರಾಜಶೇಖರ, ಪೂರ್ಣಿಮ ಹಾಗೂ ಸದಸ್ಯರಾದ ಅರುಣಕುಮಾರ್ ಇದ್ದರು.