ಯುವಜನರು ಸ್ವ್ವಾಮಿ ವಿವೇಕಾನಂದರ ಜೀವನದ ಆದರ್ಶಗಳನ್ನು ಅಳವಡಿಸಿಕೊಳ್ಳಿಃ ದೊಡ್ಡಮನಿ

ವಿಜಯಪುರ, ಜ.14-ಸ್ವ್ವಾಮಿ ವಿವೇಕಾನಂದರ ಜೀವನದ ಆದರ್ಶಗಳನ್ನು ಇಂದಿನ ಯುವ ಪೀಳಿಕೆ ರೂಢಿಸಿಕೊಂಡರೆ, ದೇಶದ ಸತ್ಪ್ರಜೆಗಳಾಗುವುದರಲ್ಲಿ ಸಂದೇಹವಿಲ್ಲ ಎಂದು ರಿಮಾಂಡ್ ರೂಮ್ ಹತ್ತಿರದ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ದೊಡ್ಡಮನಿ ಅವರು ಹೇಳಿದರು.
ನಗರದಲ್ಲಿ ಕೇಂದ್ರ ಸರಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ರಿಮಾಂಡ್ ರೂಮ್ ಹತ್ತಿರದ ಸರಕಾರಿ ಪ್ರೌಢ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವಜನರು ಆತ್ಮವಿಶ್ವಾಸ, ಯಾವುದನ್ನೇ ಆಗಲಿ ಸಾಧಿಸುತ್ತೇನೆ ಎಂಬ ಆತ್ಮಬಲವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ದೇಶ ವಿದೇಶಗಳಲ್ಲಿ ಸಂಚರಿಸಿ ಹಿಂದುತ್ವ, ಭಾರತೀಯ ಸಂಸ್ಕøತಿಯ ಜೇಷ್ಠತೆ ಮತ್ತು ಯೋಗವನ್ನು ಪರಿಚಯಿಸಿದ್ದರು. ಇದಕ್ಕಾಗಿ ಭಾರತೀಯರಾದ ನಾವು ಹೆಮ್ಮೆ ಪಡಬೇಕು ಹಾಗೂ ಅದನ್ನು ಉಳಿಸಿ ಹಾಗೂ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸಿ ಕೆ ಸುರೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 15 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಹೆಚ್ ಆರ್ ಬಾಲಿ, ವಿ ಬಿ ಬಿರಾದರ, ಹಿರೇಕುರಬಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.