ಯುವಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು: ಡಾ.ಹೆಚ್.ಎನ್ ಗೋಪಾಲಕೃಷ್ಣ

ಮಂಡ್ಯ.ಜೂ.15:- ಯುವಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ಈ ನಿಟ್ಟಿನಲ್ಲಿ ಇತರರಿಗೆ ಮಾದರಿಯಾಗಿ ರಕ್ತದಾನದ ಮಹತ್ವ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ:ಹೆಚ್ ಎನ್ ಗೋಪಾಲಕೃಷ್ಣ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಮಾಂಡವ್ಯ ಸಂಸ್ಥೆಯ ಆಶ್ರಯದಲ್ಲಿಂದು ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ದೇಹದಲ್ಲಿ 5 ರಿಂದ 6 ಲೀಟರ್ ರಕ್ತ ಇರುತ್ತದೆ. ಆದರಲ್ಲಿ ನಾವು ಒಂದು ಬಾರಿ ರಕ್ತ ದಾನ ಮಾಡಿದಾಗ 350 ಎಂ.ಎಲ್ ರಕ್ತ ತೆಗೆದುಕೊಳ್ಳುತ್ತಾರೆ.
ಅದು ಮತ್ತೆ 120 ದಿನಗಳಲ್ಲಿ ದೇಹದಲ್ಲಿ ಉತ್ಪತ್ತಿಯಾಗಿ ಚೇತರಿಕೆಯಾಗುತ್ತದೆ ಆಗಾಗಿ ರಕ್ತದಾನದ ಬಗ್ಗೆ ಭಯ ಬೇಡ ಎಂದರು.
ಮಂಡ್ಯ ಜಿಲ್ಲೆಗೆ ಬೇಡಿಕೆಯಂತೆ ತಿಂಗಳಿಗೆ 1200 ಯುನಿಟ್ ರಕ್ತದ ಅವಶ್ಯಕತೆ ಇದೆ. ಇದರಲ್ಲಿ 650 ಯುನಿಟ್ ಮಾತ್ರ ರಕ್ತ ಸಿಗುತ್ತಿದೆ. ಹೀಗಾಗಿ ಸಾರ್ವಜನಿಕರು ರಕ್ತದಾನ ಮಾಡಿ ಜೀವ ಉಳಿಸಿ ಎಂದು ಮನವಿ ಮಾಡಿದರು.
ಮಂಡ್ಯದವರೇ ಆದ ನೆಲದನಿ ಬಳಗದ ಲಂಕೇಶ್ 67 ಬಾರಿ, ಜೀವಧಾರೆಯ ನಟರಾಜ್ 60 ಬಾರಿ ರಕ್ತದಾನ ಮಾಡಿ ನಿಮ್ಮ ಮುಂದೆಯೇ ಆರೋಗ್ಯವಾಗಿದ್ದಾರೆ. ಅವರೇ ನಿಮಗೆ ಪ್ರೇರಣೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಅವರು ಮಾತನಾಡಿ ನಮ್ಮ ಜಿಲ್ಲೆಯ ಅಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಸಹಕಾರದಿಂದ ರಕ್ತದಾನದ ಸಪ್ತಾಹ ಮಾಡಿದ್ದರಿಂದ ಒಂದು ವಾರಕ್ಕೆ 700 ಯುನಿಟ್ ರಕ್ತ ಸಂಗ್ರಹವಾಗಿದೆ ಇದಕ್ಕೆ ಸಹಕರಿಸಿ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಮಂಡ್ಯ ಜಿಲ್ಲೆಯು ರಕ್ತದಾನ ಮಾಡುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ವರದಿಯಾಗಿರುವುದು ಸಂತೋಷದ ವಿಷಯ. ನಮ್ಮ ಜಿಲ್ಲೆಯ ಬಾಣಂತಿಯರಿಗೆ ಹೆಚ್ಚಿನ ರಕ್ತದಾನದ ಅವಶ್ಯಕತೆ ಇದೆ. ಹೆಣ್ಣು, ಗಂಡು ಎಂಬ ಭೇಧವಿಲ್ಲದೆ ಎಲ್ಲಾರು ರಕ್ತದಾನ ಮಾಡಬೇಕು ಎಂದರು.
ಬಳಿಕ ಅತಿಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಿಗೆ ಸನ್ಮಾನಿಸಿ ಗೌರವಿಸಿಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಮಾಂಡವ್ಯ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಮೀರಾಶಿವಲಿಂಗಯ್ಯ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಟಿ.ಎನ್ ಧನಂಜಯ್, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಎನ್ ಆಶಾಲತಾ, ಪಿ.ಇ.ಟಿ ನಿರ್ದೇಶಕ ಡಾ.ರಾಮಲಿಂಗಯ್ಯ, ನೋಡಲ್ ಅಧಿಕಾರಿ ಡಾ.ಹೆಚ್ ಆರ್ ಅರುಣಾನಂದ, ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಮುರಳೀಧರ್ ಭಟ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಆರ್ ಶಶಿಧರ್ ಸೇರಿದಂತೆ ಇನ್ನಿತರರು ಹಾಜರಿದ್ದರು.