ಯುವಜನರನ್ನು ಧರ್ಮ ಮತ್ತು ಜಾತಿ ಹೆಸರಿನಲ್ಲಿ ದಾರಿ ತಪ್ಪಿಸಲಾಗುತ್ತಿದೆ!

ಜೇವರ್ಗಿ :ಎ.2: ಜೇವರ್ಗಿ ಪಟ್ಟಣದ ಇಲ್ಲಿನ ಸಜ್ಜನ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ ಹಾಗೂ ಅಖಿಲ ಭಾರತ ಯುವಜನ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಕ್ರಾಂತಿಕಿಡಿಗಳಾದ ಷಹೀದ್ ಭಗತ್ ಸಿಂಗ್ ರಾಜಗುರು ಹಾಗೂ ಸುಖದೇವ ನೇಣುಗಂಬಕ್ಕೇರಿದ ನೆನಪಿನ ಆಚರಣೆ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಖಾಸಗಿ ಕಂಪನಿಗಳ ಜಾಲದಿಂದ ರೈತರು ಯುವಕರು ಹಾಗೂ ದುಡಿಯುವ ಜನರು ದಾರಿಕಾಣದೆ ಕಂಗಾಲಾಗಿದ್ದಾರೆ. ಯುವಜನರನ್ನು ಧರ್ಮ ಮತ್ತು ಜಾತಿ ಹೆಸರಿನಲ್ಲಿ ದಾರಿ ತಪ್ಪಿಸಲಾಗುತ್ತಿದೆ. ಈ ಕುರಿತಂತೆ ನಮ್ಮ ಯುವಕರು ಜಾಗೃತರಾಗದಿದ್ದಲ್ಲಿ ಮತ್ತೊಮ್ಮೆ ನಾವು ಕಾರ್ಪೊರೇಟ್ ಕಂಪನಿಗಳ ಕೈಗೊಂಬೆಗಳಾಗಿ ಗುಲಾಮರಾಗಿ ಜೀತ ಪದ್ಧತಿಯಿಂದ ಮುಕ್ತರಾಗದೇ ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಬದುಕಬೇಕಾಗುತ್ತದೆ ಎಂದು ಹೇಳಿದರು.

ಯುವಕರು ಇಂದು ಅನವಶ್ಯಕ ಸಂಗತಿಗಳು ಹಾಗೂ ರಾಜಕೀಯ ಪಕ್ಷಗಳ ಮಧ್ಯದಲ್ಲಿ ಸಿಕ್ಕು ನರಳುತ್ತಿದ್ದಾರೆ :
ಕಾರ್ಯಕ್ರಮದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ (ಎ.ಐ.ಎಸ್. ಎಫ್ )ರಾಜ್ಯ ಅಧ್ಯಕ್ಷರಾದ ಜ್ಯೋತಿ ಕೆ. ಮಾತನಾಡಿ ನಮ್ಮ ದೇಶದ ಯುವಕರು ಇಂದು ಅನವಶ್ಯಕ ಸಂಗತಿಗಳು ಹಾಗೂ ರಾಜಕೀಯ ಪಕ್ಷಗಳ ಮಧ್ಯದಲ್ಲಿ ಹುಸಿ ಯಾದ ಭರವಸೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ನರಳಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಎಲ್ಲಾ ಉದ್ಯಮಗಳ ಖಾಸಗೀಕರಣ ಹಾಗೂ ಜಾಗತೀಕರಣದಿಂದಾಗಿ ಸಾಮಾನ್ಯ ಜನರ ಬದುಕು ಕಷ್ಟಕರವಾಗವಾಗಲಿದೆ. ನಿರುದ್ಯೋಗ ಹಾಗೂ ಸ್ವಜನಪಕ್ಷಪಾತದ ಧೋರಣೆ ಅಪಾಯಕರ . ಸಂವಿಧಾನದ ಸಮಾನತೆ ಹಾಗೂ ಭಾತೃತ್ವದ ಅಂಶಗಳ ಮೇಲೆ ದಾಳಿಯಿಂದಾಗಿ ಯುವಜನರ ಭವಿಷ್ಯವನ್ನು ಹಾಳು ಮಾಡಲಾಗುತ್ತಿವೆ .ಇದನ್ನು ತಡೆಯಲು ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದು ಹೇಳಿದರು.

ಸ್ವತಂತ್ರ ಚಿಂತನೆಯ ಮುತ್ಸದ್ದಿ ಯುವಕರು ಧೀಮಂತ ಸೇನಾನಿಗಳು ಮುಂಬರಬೇಕು:
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ ಮಾಜಿ ರಾಜ್ಯ ಅಧ್ಯಕ್ಷರಾದ ಮಹೇಶ್ ಕುಮಾರ್ ರಾಠೋಡ ನಮ್ಮ ಭಾರತ ದೇಶಕ್ಕೆ ಭಗತ್ ಸಿಂಗ್ ಹಾಗೂ ಸುಖದೇವ್ ರಾಜಗುರು ಇವರಂತಹ ಸ್ವತಂತ್ರ ಚಿಂತನೆಯ ಮುತ್ಸದ್ದಿ ವಿದ್ಯಾರ್ಥಿ ಯುವಜನರು ಹಾಗೂ ಅಭಿಮಾನಿಗಳು ಹೋರಾಟದ ಕಣಕ್ಕೆ ಧುಮುಕಬೇಕು. ಸರಕಾರಗಳು ನೂತನ ಶಿಕ್ಷಣ ನೀತಿ ಹಾಗೂ ಕಾರ್ಮಿಕರ ವಿರೋಧಿ ಎಪಿಎಂಸಿ ಕಾಯ್ದೆಗಳ ಮೂಲಕ ರಾಷ್ಟ್ರದ ಹಿತವನ್ನು ಬಲಿ ನೀಡಿವೆ. ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾ ರೈತರ ಜಖಾಕಂಪನಿಗೆ ನೀಡಿ ಈ ಮೂಲಕ ಬಡವರು ದೀನದಲಿತರು ಹಾಗೂ ದುಡಿಯುವ ಜನರ ಬದುಕನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ.
ದೇಶದ ರಾಜಧಾನಿಯಲ್ಲಿ ಲಕ್ಷಾಂತರ ರೈತರು ಮೂರು ತಿಂಗಳಿಂದ ನಿರಂತರ ಸತ್ಯಾಗ್ರಹ ಸೇರಿದಂತೆ ಅವಿರತ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ರೈತರ ಮನವಿಗೆ ಸ್ಪಂದಿಸುತ್ತಿಲ್ಲ ದುಡಿಯುವ ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸದೆ ಅನ್ನದಾತರ ನೆರವಿಗೆ ಬಾರದೆ ಜಾಣಕುರುಡುತನ ತೋರಿಸುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಎಲ್ಲಾ ಖಾಸಗಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಯುವಜನ ಒಕ್ಕೂಟದ ತಾಲೂಕ ಅಧ್ಯಕ್ಷರಾದ ಅಪ್ಪಸಾಬ್ ಮಡಿವಾಳರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವಜನ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಹಣಮಂತ ಅಟ್ಟೂರ್ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ ತಾಲೂಕ ಅಧ್ಯಕ್ಷರಾದ ರಾಮನಾಥ್ ಭಂಡಾರಿ ಹಾಗೂ ವಿದ್ಯಾರ್ಥಿ ಒಕ್ಕೂಟದ ತಾಲೂಕ ಕಾರ್ಯದರ್ಶಿ ರಾಜು ಮುದಡಗಿ ಸೇರಿದಂತೆ ಕದಂಬ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಶೈಲ್ ಕಣದಾಳ ಶ್ರೀ ಸಾಯಿ ಕಾಲೇಜಿನ ಪ್ರಾಚಾರ್ಯರಾದ ಅಮೀನ್ ಅಪ್ಪ ಹೊಸಮನಿ ಹಾಗೂ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಅಲ್ಲಾವುದ್ದೀನ್ ಸೇರಿದಂತೆ, ಸುನಿಲ್ ಕಾಂಬಳೆ ,ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಭೀಮಶಂಕರ್ ಮಡಿಯಾಳ, ಕಾರ್ಮಿಕ ಸಂಘಟನೆಯ ಪ್ರಭುದೇವರ ಯಳಸಂಗಿ, ಗುಂಡೂರಾವ್ ಜಮಖಂಡಿ, ಮಲ್ಲಿಕಾರ್ಜುನ ದಿನ್ನಿ, ಗುರುನಾಥ್ ಸಾಹು ರಾಜವಾಳ, ಸೈದಪ್ಪ ಇಜೇರಿ .ದಯಾನಂದ್ ಕೆಲ್ಲೂರ್. ರಮೇಶ್ ಜಾಧವ್ ಕೃಷ್ಣ ಸುಬೇದಾರ್, ವಿವಿಧ ಕಾಲೇಜುಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು