
ಸುಳ್ಯ, ಮಾ.೨೬-ರಾಷ್ಟ್ರ ಪುನರ್ ನಿರ್ಮಾಣ ಕಾರ್ಯದಲ್ಲಿ ಯುವ ಜನತೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು. ಪಕ್ಷ ರಾಜಕಾರಣಕ್ಕಿಂತ ರಾಷ್ಟ್ರ ರಾಜಕಾರಣ ಮತ್ತು ರಾಷ್ಟ್ರೀಯ ವಿಚಾರಧಾರೆಗಳೇ ಮುಖ್ಯ ಎಂದು ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಹೇಳಿದ್ದಾರೆ.
ಭಗತ್ ಸಿಂಗ್,ರಾಜಗುರು, ಸುಖದೇವರ ಹುತಾತ್ಮ ದಿನದ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸುಳ್ಯದಲ್ಲಿ ನಡೆದ ವೀರ ನಮನ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ರಾಷ್ಟ್ರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ವೀರರ ಜೀವನವು ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಹೊಸ ತಲೆಮಾರಿಗೆ ಪ್ರೇರಣೆಯಾಗಬೇಕು ಎಂದು ಅವರು ಕರೆ ನೀಡಿದರು.
ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಎಬಿವಿಪಿ ಸುಳ್ಯದ ನಗರ ಕಾರ್ಯದರ್ಶಿ ರುಚಿರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಬಿವಿಪಿ ಸುಳ್ಯ ನಗರ ಪ್ರಮುಖ್ ಕುಲದೀಪ್ ಪೆಲ್ತಡ್ಕ ಸ್ವಾಗತಿಸಿ, ಮಂಗಳೂರು ವಿಭಾಗ ಸಂಚಾಲಕ ಸಂದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಯಶೋಧಾ ರಾಮಚಂದ್ರ, ಬೂಡು ರಾಧಾಕೃಷ್ಣ ರೈ, ಸುನಿಲ್ ಕೇರ್ಪಳ, ಕಿಶನ್ ಜಬಳೆ, ಗುರುದತ್ ನಾಯಕ್,ರಾಜೇಶ್ ಮೇನಾಲ, ದೊಡ್ಡಣ್ಣ ಬರೆಮೇಲು, ಎಬಿವಿಪಿ ಮುಖಂಡರಾದ ನಿಕೇಶ್ ಉಬರಡ್ಕ,
ಕೌಶಲ್, ಕೀರ್ತನ್ ಮತ್ತಿತರರು ಉಪಸ್ಥಿತರಿದ್ದರು.