ಯುವಜನತೆಯ ಬದುಕು ಗಟ್ಟಿಗೊಳ್ಳಬೇಕಾದರೆ ಜಾನಪದ ಪರಂಪರೆಯ ತಳಹದಿ ಅತೀ ಅವಶ್ಯಕವಾಗಿದೆಃ ಶಂಕರ ಬೈಚಬಾಳ

ವಿಜಯಪುರ, ಏ.2-ಮಾನವ ಜನಾಂಗದ ವಿಕಾಸಕ್ಕೆ ಜನಪದರ ಮೂಲವೇ ಜೀವಾಳವಾಗಿದೆ. ಯುವಜನತೆಯ ಬದುಕು ಗಟ್ಟಿಗೊಳ್ಳಬೇಕಾದರೆ ಜಾನಪದ ಪರಂಪರೆಯ ತಳಹದಿ ಅತೀ ಅವಶ್ಯಕವಾಗಿದೆ ಎಂದು ಜನಪದ ಸಾಹಿತಿ ಶಂಕರ ಬೈಚಬಾಳ ಹೇಳಿದರು.
ಅವರು ಉಕ್ಕಲಿ ಗ್ರಾಮದ ಬಿ.ಎಲ್.ಡಿ.ಇ. ಸಂಸ್ಥೆಯ ನೂತನ ಕಲಾ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಜಾನಪದ ಪರಿಷತ್ತು ತಾಲೂಕು ಘಟಕದಿಂದ ಹಮ್ಮಿಕೊಂಡ ವಿಕಾಸದತ್ತ ಜಾನಪದ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ನಾಡಿನ ಪರಿಸರದಲ್ಲಿ ಅನೇಕ ಜನಪದ ಗರತಿಯರು ಹಾಗೂ ರೈತ ಒಕ್ಕಲಿಗ ಬಂಧುಗಳು ತಮ್ಮ ಕಾಯಕದೊಂದಿಗೆ ಆ ಭಾಗದ ಇತಿಹಾಸ ಮತ್ತು ಪರಂಪರೆ ಸಾರುವ ಹಲವು ಜಾನಪದ ಗೀತೆಗಳನ್ನು, ಕಥೆಗಳನ್ನು ಕಟ್ಟುವ ಮೂಲಕ ಜಾನಪದ ಇತಿಹಾಸವನ್ನು ಸೃಷ್ಠಿಸಿದ್ದಾರೆ ಎಂದರು.
ಮನಗೂಳಿ ವಲಯ ಕನ್ನಡ ಜಾನಪದ ಪರಿಷತ್ತ ಅಧ್ಯಕ್ಷ ಸಿದ್ರಾಮ ಬಿರಾದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಜಾನಪದ ಪರಿಷತ್ತು ನಿರಂತರವಾಗಿ ಈ ನಾಡಿನ ಸಾಹಿತ್ಯದ ವೈಶಿಷ್ಟ್ಯಗಳಲ್ಲಿ ಒಂದಾದ ಜಾನಪದ ಸಾಹಿತ್ಯವನ್ನು ಉಳಿಸಿ ಬೆಳಸಲಿಕ್ಕೆ ಶ್ರಮಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಕಲಾವಿದರಿಂದ ಚೌಡಕಿ ಪದ, ಶಹನಾಯಿ ವಾದನ, ಕರಡಿ ಮಜಲು, ತತ್ವಪದ ಸೇರಿದಂತೆ ವಿವಿಧ ಕಾರ್ಯಕ್ರಮಗಳು ವೇದಿಕೆಯಲ್ಲಿ ಜರುಗಿದವು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಕಲಾ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಕೆ. ನಾಯಕ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಿದ್ದು ಅಲಗೊಂಡ, ರಘುನಾಥ ಬಾಣಿಕೋಲ, ರಫೀಕ ಕರಜಗಿ, ತಮ್ಮಣ್ಣ ಭಜಂತ್ರಿ, ಈರಣ್ಣ ಹೊಸಟ್ಟಿ, ಸಿ.ಜೆ. ಹಿರೇಮಠ, ಅಶೋಕ ಗೆಣ್ಣೂರ ಇದ್ದರು.
ಪ್ರಾಧ್ಯಾಪಕ ಎಸ್.ಬಿ.ಜೊತೆಕಾಂತ ಸ್ವಾಗತಿಸಿದರು, ಆರ್.ಸಿ. ನಾಗೋಣಿ ನಿರೂಪಿಸಿದರು. ಡಿ.ವಿ. ಚಣೆಗಾಂವ ವಂದಿಸಿದರು.