ಯುವಕ ಸಾವು, ಕೊಲೆ ಶಂಕೆ?


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 2 :-   ಸ್ನೇಹಿತರೊಂದಿಗೆ ಗ್ರಾಮದ ಹೊರವಲಯಕ್ಕೆ ಹೋಗಿದ್ದ ಯುವಕ
ಕುಮತಿ ರಸ್ತೆಯಲ್ಲಿ ತೀವ್ರ ರಕ್ತಸಿಕ್ತನಾಗಿ  ಗಾಯಗೊಂಡು ಮೃತಪಟ್ಟಿರುವ ಘಟನೆ ತಾಲೂಕಿನ ತಾಯಕನಹಳ್ಳಿ ಬಳಿ ಶುಕ್ರವಾರ ರಾತ್ರಿ ನಡೆದಿದ್ದು, ಮೃತನ ಕಡೆಯವರು  ಕೊಲೆಯಾಗಿರುವ ಶಂಕೆ ವ್ಯಕ್ತ ಪಡಿಸಿದ್ದಾರೆ.
ತಾಯಕನಹಳ್ಳಿ ನಿವಾಸಿ ಉಚ್ಚಂಗಿ (25) ಮೃತ ಯುವಕ. ಶುಕ್ರವಾರ ರಾತ್ರಿ 8ಗಂಟೆಗೆ ಗ್ರಾಮದ ಕೆಂಚಪ್ಪ ಹಾಗೂ ಅವನ ಸ್ನೇಹಿತರು  ಮನೆಯ ಮುಂದೆ ಇದ್ದ ಮಗ ಉಚ್ಚಂಗಿಯನ್ನು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗಿದ್ದರು. ಆದರೆ, ಒಂದು ತಾಸಿನ ನಂತರ ನಮ್ಮ ಮಗ ಮೃತಪಟ್ಟಿರುವ ಬಗ್ಗೆ ತಿಳಿದು ಸ್ಥಳಕ್ಕೆ ಹೋಗಿದ್ದಾಗ ನಡು ರಸ್ತೆಯಲ್ಲಿ ನನ್ನ ಮಗನ ಶವ ಬಿದ್ದಿತ್ತು. ಚಾಕುವಿನಿಂದ ಚುಚ್ಚಿ, ತೊಡೆಯ ಭಾಗ ಹಾಗೂ ವೃಷಣಗಳನ್ನು ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆಂದು ಮೃತನ ತಂದೆ ಗಂಗಪ್ಪ ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಕೊಟ್ಟೂರು ಸಿಪಿಐ ವೆಂಕಟಸ್ವಾಮಿ, ಕಾನಹೊಸಹಳ್ಳಿ ಪಿಎಸ್ಐ ಎರಿಯಪ್ಪ ಅಂಗಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತನ ತಂದೆ ನೀಡಿದ ದೂರಿನನ್ವಯ ಕಾನಹೊಸಹಳ್ಳಿ ಠಾಣೆಯಲ್ಲಿ ಶನಿವಾರ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆ ನಂತರ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.