ಯುವಕ ಶವವಾಗಿ ಪತ್ತೆ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಶಂಕೆ

ಕಲಬುರಗಿ:ಮಾ.11: ಪಕ್ಕದ ಮನೆಯಲ್ಲಿ ಯುವಕನೊಬ್ಬ ಶವವಾಗಿ ಪತ್ತೆಯಾದ ಘಟನೆ ಅಫಜಲಪುರ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ಸಂಭವಿಸಿದ್ದು, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ಯುವಕನ ಮನೆಯವರು ಆರೋಪಿಸಿದ್ದಾರೆ.
ಮೃತನಿಗೆ ಶಿವಶರಣಪ್ಪ ತಂದೆ ಸಂಗಣ್ಣ ಜಮಾದಾರ್ (28) ಎಂದು ಗುರುತಿಸಲಾಗಿದೆ. ಶಿವಶರಣಪ್ಪನು ಕ್ರೂಸರ್ ಚಾಲಕನಾಗಿದ್ದು, ಪಕ್ಕದ ಮನೆಯ ಮಹಿಳೆಯೊಬ್ಬಳ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಆಕೆಯ ಕಡೆಯವರೇ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಕಳೆದ ರಾತ್ರಿ ಊಟ ಮಾಡಿ ಶಿವಶರಣಪ್ಪ ಮನೆಯ ಮಹಡಿ ಮೇಲೆ ಮಲಗಿದ್ದ. ರಾತ್ರಿ 12 ಗಂಟೆಯ ಸುಮಾರಿಗೆ ಪಕ್ಕದ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾನೆ. ಆದಾಗ್ಯೂ, ಅನೈತಿಕ ಸಂಬಂಧದ ಆರೋಪದ ಮೇಲೆ ತನ್ನ ಪುತ್ರನಿಗೆ ಪಕ್ಕದ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಹೆತ್ತವರು ಆರೋಪಿಸಿದ್ದಾರೆ.
ಪುತ್ರನಿಗೆ ಕಳೆದುಕೊಂಡ ಹೆತ್ತವರ ಕಣ್ಣೀರು ಮುಗಿಲು ಮುಟ್ಟಿತ್ತು. ಹೆತ್ತವರನ್ನು ಸಂತೈಸಲು ಅನೇಕರು ಪರದಾಡುತ್ತಿದ್ದರು. ಮತ್ತೊಂದೆಡೆ ಸಂಬಂಧಿಕರೂ ಸಹ ಆಕ್ರಂದಿಸುತ್ತಿದ್ದರು. ಮನೆಗೆ ಆಧಾರವಾಗಿದ್ದ ಪುತ್ರ ಬಾರದ ಲೋಕಕ್ಕೆ ಹೋಗಿದ್ದ. ಇದು ಹೆತ್ತವರಿಗೆ ಅರಗಿಸಿಕೊಳ್ಳಲು ಆಗಲಿಲ್ಲ. ಪುತ್ರನಿಗೆ ಕಳೆದುಕೊಂಡು ಗೋಳಾಡುತ್ತಿದ್ದರು.
ಕ್ರೂಸರ್ ಚಾಲಕನಾಗಿದ್ದ ಶಿವಶರಣಪ್ಪ ಮೊದಲು ತನ್ನದೇ ಆದ ಕ್ರೂಸರ್ ಹೊಂದಿದ್ದ. ಆದಾಗ್ಯೂ, ಕಳೆದ ಕೆಲವು ದಿನಗಳ ಹಿಂದೆ ತನ್ನ ಸ್ವಂತ ವಾಹನವನ್ನು ಮಾರಾಟ ಮಾಡಿದ್ದ. ಅವರಿವರ ಕ್ರೂಸರ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಇನ್ನೂ ಮದುವೆ ಆಗಿರಲಿಲ್ಲ. ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಊಟ ಮಾಡಿ ಮನೆಯ ಮಹಡಿಯ ಮೇಲೆ ಮಲಗಿದ್ದ. ಆದಾಗ್ಯೂ, ರಾತ್ರಿ ಹತ್ತು ಗಂಟೆಯ ಸುಮಾರಿಗೆ ಮನೆಗೆ ಬಂದಿದ್ದ ಸ್ವಗ್ರಾಮದ ತುಳಜಪ್ಪ ಮತ್ತು ಸಾಯಿಬಣ್ಣ ಎಂಬುವವರು ಕರೆದುಕೊಂಡು ಹೋಗಿದ್ದರು. ಕ್ರೂಸರ್ ಚಾಲಕನಾಗಿದ್ದರಿಂದ ಬಾಡಿಗೆಗೆ ಕರೆದುಕೊಂಡು ಹೋಗಿರಬಹುದು ಎಂದು ಮನೆಯವರು ಭಾವಿಸಿದ್ದರು.
ಆದಾಗ್ಯೂ, ರಾತ್ರಿ ಹನ್ನೆರಡು ಗಂಟೆಯ ಸುಮಾರಿಗೆ ಶಿವಶರಣಪ್ಪನ ಮನೆಗೆ ಬಂದಿದ್ದ ಪಕ್ಕದ ನಿವಾಸಿ ಶ್ರೀಮಂತ್ ಎಂಬಾತನು ನಿಮ್ಮ ಪುತ್ರ ನಮ್ಮ ಮನೆಯಲ್ಲಿ ಕುಡಿದು ಬಿದ್ದಿದ್ದಾನೆ. ಕರೆದುಕೊಂಡು ಹೋಗಿ ಎಂದು ಹೇಳಿದ. ಹೀಗಾಗಿ ಶಿವಶರಣಪ್ಪ ತಾಯಿ ಮಲ್ಲಮ್ಮಳು ಶಿವಶರಣಪ್ಪ ಬಿದ್ದಿದ್ದ ಮನೆಗೆ ಹೋಗಿ ನೋಡಿದಾಗ, ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಹೀಗಾಗಿ ಹೆತ್ತವರು ಆಸ್ಪತ್ರೆಗೆ ಕರೆದುಕೊಂಡು ಹೊಗುವ ಕೆಲಸ ಮಾಡಿದರು. ಆದಾಗ್ಯೂ, ಆತ ಮೃತಪಟ್ಟಿರುವ ವಿಷಯ ತಿಳಿದು ಕುಗ್ಗಿ ಹೋದರು.
ಶಿವಶರಣಪ್ಪನು ಪಕ್ಕದ ಮನೆಯ ವಿವಾಹಿತ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ. ಆಕೆಯೂ ಸಹ ಆತನೊಂದಿಗೆ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಳು. ಈ ಹಿಂದೆ ಆಕೆಯ ಕಡೆಯವರು ಶಿವಶರಣಪ್ಪನಿಗೆ ಹೊಡೆದಿದ್ದರು. ಅಲ್ಲದೇ ಜೀವ ಬೆದರಿಕೆಯನ್ನೂ ಹಾಕಿದ್ದರು. ಆದಾಗ್ಯೂ, ಅವರ ಕಡೆಯವರೊಬ್ಬರು ನಮ್ಮಾಕೆಯದೇ ತಪ್ಪಿದೆ. ಆತನಿಗೆ ಏನು ಮಾಡುವುದು ಬೇಡ ಎಂದು ತಿಳಿಹೇಳಿದ್ದ ಎಂದು ಯುವಕನ ತಾಯಿ ಮಲ್ಲಮ್ಮ ಅವರು ಹೇಳಿದರು.
ಕೈಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಮೃತನ ದೇಹದ ಮೇಲೆ ಯಾವುದೇ ರೀತಿಯಲ್ಲಿ ಗಾಯಗಳು ಆಗಿಲ್ಲ. ಮಾರಕಾಸ್ತ್ರಗಳಿಂದ ಹೊಡೆದು ಗುರುತುಗಳೂ ಸಹ ಇಲ್ಲ ಎಂದು ಮೃತ ಯುವಕನ ಕುಟುಂಬಸ್ಥರು ಹೇಳಿದ್ದಾರೆ. ಈ ಕುರಿತು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ವರದಿಯ ನಂತರ ಸಹಜ ಸಾವೋ ಇಲ್ಲವೇ ಕೊಲೆ ಎಂಬುದು ಗೊತ್ತಾಗಲಿದೆ. ಏನೇ ಆದರೂ ಬದುಕಿ ಬಾಳಬೇಕಾಗಿದ್ದ ಯುವಕ ಪಕ್ಕದ ಮನೆಯಲ್ಲಿ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.