ಯುವಕ, ಯುವತಿಯರಿಂದ ಸ್ವಯಂ ಪ್ರೇರಿತ ರಕ್ತದಾನ

ಮೈಸೂರು,ಡಿ.4:- ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸ್ಮರಣೆಯ ಅಂಗವಾಗಿ ರಕ್ತದಾನ ಮಹಾದಾನ ಗೋಭಕ್ತ ಸಂಘಟನೆ ಟ್ರಸ್ಟ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ 200 ಯುವಕ ಯುವತಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಿದ್ದಾರೆ.
ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಡಾ.ಮೊಹಮ್ಮದ್ ಸಿರಾಜ್ ಅಹ್ಮದ್ ಮಾತನಾಡಿ ಮೈಸೂರಿನಲ್ಲಿ ಕೋವಿಡ್ ಸಂದರ್ಭದಲ್ಲಿ ರಕ್ತದ ಶೇಖರಣೆ ಕುಸಿದಾಗ ಜೀವಧಾರ ರಕ್ತನಿಧಿ ಕೇಂದ್ರ ರಕ್ತದಾನ ಶಿಬಿರ ಮತ್ತು ರಕ್ತದಾನಿಗಳ ಬಳಗವನ್ನು ಒಗ್ಗೂಡಿಸಿಕೊಂಡು ಹಲವಾರು ಮಂದಿಯ ಬದುಕಿಗೆ ಆಸರೆಯಾಯಿತು. ಅಷ್ಟೆ ಅಲ್ಲದೇ ಆರ್ಥಿಕವಾಗಿ ಅಶಕ್ತರಿಗೆ, ಗರ್ಭಿಣಿಯರಿಗೆ ಮತ್ತು ಅಪಘಾತವಾದವರಿಗೆ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆಯಿದ್ದಾಗ ಮಾನವೀಯತೆ, ಸಹಕಾರ ಮನೋಭಾವದಿಂದ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ, ಅದಕ್ಕಾಗಿಯೇ ನಮ್ಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜೀವಧಾರ ರಕ್ತನಿಧಿಕ್ಕೆ ಕೇಂದ್ರಕ್ಕೆ ಅತ್ಯುತ್ತಮ ರಕ್ತನಿಧಿ ಕೇಂದ್ರ ಎಂದು ಪ್ರಶಸ್ತಿ ನೀಡಿ ಅಭಿನಂದಿಸಲಾಗಿದೆ, ಮುಂದಿನ ದಿನದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲು ಮುಂದಾದರೆ ನಮ್ಮ ಆರೋಗ್ಯ ಇಲಾಖೆ ಎಲ್ಲ ರೀತಿಯ ಸಹಕಾರ ಕೊಡಲಿದೆ ಎಂದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಎಸ್.ಇ ಗಿರೀಶ್ ಮಾತನಾಡಿ ಸಮಾಜದಲ್ಲಿ ಒಬ್ಬ ವ್ಯಕ್ತಿ ಬದುಕಿದ್ದಾಗ ಮಾಡಿದ ಸಮಾಜಸೇವೆ, ಸಮಾಜದ ಪುಣ್ಯದ ಕೆಲಸಗಳು ಸ್ಮರಿಸುವ ನಿಟ್ಟಿನಲ್ಲಿ ರಕ್ತದಾನ, ನೇತ್ರದಾನ ನಡೆಯುತ್ತಿವೆ ಎಂದರೆ ಅದಕ್ಕೆ ಪುನೀತ್ ರಾಜಕುಮಾರ್ ಅವರೇ ನಿದರ್ಶನ. ದೊಡ್ಮನೆ ಹುಡುಗ ಎಂಬಂತೆ ಅವರ ಅಭಿಮಾನಿಗಳು ಮೈಸೂರಿನಲ್ಲಿ ಸಹಸ್ರಾರು ಮಂದಿ ನಮ್ಮ ಜೀವಧಾರ ರಕ್ತದಾನ ಕೇಂದ್ರದಲ್ಲಿ ರಕ್ತದಾನ ಮಾಡಿದ್ದಾರೆ, ಪುನೀತ್ ರಾಜಕುಮಾರ್ ಅವರು ಇಂದಿನ ಯುವಪೀಳಿಗೆಗೆ ಆದರ್ಶವಾಗಿದ್ದಾರೆ ಎಂದರು.
ರಕ್ತದಾನ ಮಹಾದಾನ ಗೋಭಕ್ತ ಸಂಘಟನೆ ಟ್ರಸ್ಟ್ ನ ಅಧ್ಯಕ್ಷರಾದ ದೇವೇಂದ್ರ ಮಾತನಾಡಿ ಎರಡೂ ಕೈಗಳನ್ನು ಕಳೆದುಕೊಂಡವರು ವಾಹನ ಚಲಾಯಿಸುತ್ತಾರೆ. ಅಲ್ಲದೇ ಕೈ ಇಲ್ಲದವರು ಕಾಲಿನ ಮೂಲಕ ಬರೆಯುತ್ತಾರೆ.
ಈ ನಿಟ್ಟಿನಲ್ಲಿ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು. ಮುಖ್ಯವಾಗಿ ಎಲ್ಲರೂ ಕೆಲಸ ಮಾಡುವ ಮನಸ್ಸು ಹೊಂದಬೇಕು. ಅಂದಾಗ ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ. ಶ್ರಮ ಪಡುವ ಮನಸ್ಥಿತಿಯನ್ನು ಹೊಂದುವ ಮೂಲಕ ಸುಭದ್ರ ಬದುಕು ಕಟ್ಟಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು.
ರಕ್ತದಾನ ಶಿಬಿರದಲ್ಲಿ ಮುತ್ತಣ್ಣ, ಡಾ.ರಾಧಾ, ಯೋಜನಾ ನಿರ್ದೇಶಕ ಆನಂದ್ ಮಂಡೋತ್, ಸಂಚಾಲಕ ಮಹೇಂದರ್ ಚೋಯಲ್, ಸಹ-ಯೋಜನಾ ನಿರ್ದೇಶಕ ಚಿರಂಜಿಲಾಲ್ ಕುಮಾವತ್, ಸದಸ್ಯರಾದ ಸುಮಾ ಆರ್, ಬಗದಾರಾಮ್ ಕುಮವತ್, ಕೈಲಾಶ್ ರಾಥೋರ್, ಹೇಮಲತಾ, ಪ್ರತಾಪ್, ಮಾಲಿನಿ, ಮಿಸ್ಬಾ ಇನ್ನಿತರರು ಹಾಜರಿದ್ದರು.