
ರಾಯಚೂರು, ಏ.೧೧- ಡಾ.ಬಾಬು ಜಗಜೀವನರಾಮ್ ಅವರ ಬದುಕೇ ಒಂದು ಹೋರಾಟವಾಗಿತ್ತು. ಮಹಾನ್ ನಾಯಕರನ್ನು ಒಂದು ಜಾತಿಗೆ ಸೀಮಿತ ಮಾಡದೆ, ತಾರತಮ್ಯ ಭಾವನೆ ಮಾಡದೆ ಅವರನ್ನು ಸಮಾನವಾಗಿ ನೋಡಬೇಕು ಎನ್ನುವುದೇ ಈ ಕಾರ್ಯಗಾರದ ಮುಖ್ಯ ಉದ್ದೇಶವಾಗಿದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಕೆ.ಆರ್.ದುರ್ಗಾದಾಸ್ ಅವರು ಮಾತನಾಡಿದರು.
ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ ಅವರ ೧೧೬ ನೇ ಜಯಂತ್ಯೋತ್ಸವ ಹಾಗೂ ಒಂದು ದಿನದ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಡಾ.ಬಾಬು ಜಗಜೀವನರಾಮ ಅವರಲ್ಲಿ ಗೌರವ, ಪ್ರೀತಿ, ಸ್ನೇಹ ಮನೋಭಾವ ಇರುವುದು ನಮಗೆಲ್ಲ ಮಾದರಿಯಾಗಿದ್ದು, ಅವರ ನಾಯಕತ್ವ ಗುಣ ಮತ್ತು ಸಾಧನೆ ವಿದ್ಯಾರ್ಥಿಗಳ ಯುವಕರ ಬೆಳವಣಿಗೆಗೆ ಬಹು ಮುಖ್ಯ ಪಾತ್ರವಹಿಸುತ್ತವೆ. ರಾಜಕೀಯ ಚಿಂತನೆಗಳು,ಸಮಜಕಾರ್ಯ ಮನೋಭಾವನೆಗಳು ಬೆಳೆಸುತ್ತ, ಹೆಚ್ಚಿನ ಗುಣಮಟ್ಟದ ವಿದ್ಯಾಭ್ಯಾಸದ ಬಗ್ಗೆ ಅಭ್ಯಾಸ ಮಾಡೋಣ, ಸಮಾಜದ ಕುರಿತು ಅರಿವು ಮೂಡಿಸೋಣ, ಬಾಬುಜೀ ಅವರ ಧ್ಯೇಯೋದ್ದೇಶ ತಿಳಿದುಕೊಳ್ಳೊಣ ಎಂದು ಹೇಳುತ್ತ ಯುವಕರ ವ್ಯಕ್ತಿತ್ವ ವಿಕಸನಕ್ಕೆ ಬಾಬೂಜಿಯವರ ಜೀವನವೇ ಆದರ್ಶ ಎಂದರು. ಡಾ.ಕೆ.ಆರ್.ದುರ್ಗಾದಾಸ್ ಮತ್ತು ಡಾ.ಮೈಲಹಳ್ಳಿ ರೇವಣ್ಣ ಅವರು ರಚಿಸಿದ ಬಾಬೂ ಜಗಜೀವನರಾಮ್ ಎಂಬ ಕೃತಿಯೂ ಈ ಕಾರ್ಯಕ್ರಮದಲ್ಲಿ ರಾವಿವಿಯ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಅವರಿಂದ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಅವರು ಮಾತನಾಡಿ, ವಯಕ್ತಿಕ ಚಿಂತನೆಯಿಂದ, ಆಳವಾದ ಅಧ್ಯಯನದಿಂದ ಯಾವುದೇ ವಿಷಯದಲ್ಲಿ ಪರಿಪೂರ್ಣತೆ ಪಡೆದುಕೊಳ್ಳಲು ಸಾಧ್ಯ. ವಿಶ್ವವಿದ್ಯಾಲಯ ವಿಭಿನ್ನವಾಗಿ ಬೆಳೆಯಲು ವಿವಿಧ ಮುಖ್ಯ ವಿಷಯಗಳ ಚಿಂತನ-ಮಂಥನ ವಿಚಾರ-ವಿನಿಮಯ ಸವಾಲುಗಳು ತೊಡಕುಗಳು ವಿಷಯಾವಲೋಕನ ಅವುಗಳ ಚರ್ಚೆಮಾಡುತ್ತ ಪರಿಹಾರಗಳನ್ನು ಕಂಡುಕೊಳ್ಳುತ್ತ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಜಾತಿ ರಾಜಕಾರಣ ಮಾಡದ ಜಗಜೀವನರಾಮ ಹಾಗೂ ಅಂಬೇಡ್ಕರ್‌ರಂತಹ ಮಹನೀಯರ ಜೀವನ ಸಾಧನೆ ಆದರ್ಶ ತೋರುವ ಇಂತಹ ಕಾರ್ಯಗಾರಗಳನ್ನು ರೂಪಿಸಲು ರಾಯಚೂರು ವಿಶ್ವವಿದ್ಯಾಲಯ ಎಂದಿಗೂ ಸಿದ್ಧ. ವಸಹಾತುಶಾಹಿ ದೃಷ್ಟಿ ಕೋನದಲ್ಲಿ ಬಾಬುಜೀ ಚಿಂತನೆಗಳನ್ನು ನೋಡಿದಾಗ ಭಾರತ ಹೇಗೆ ವಿಕಸನ ಹೊಂದಿದೆ, ಪರಿವರ್ತನೆಯಾಗಿದೆ, ಸಮಾಜವನ್ನು ಯಾರು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಅವರು ಸಮಾಜ ಕಟ್ಟುತ್ತಾರೆ. ಸಾಕಷ್ಟು ಪುಸ್ತಕಗಳನ್ನು ಓದಿ ಚರ್ಚೆ ಮಾಡಿ ಎಂದು ಅವರು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿವಹಿಸಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಜಿ.ಬಿ.ನಂದನ ಅವರು ಮಾತನಾಡಿ, ಬಾಳಿ ಬದುಕಬೇಕಾದರೆ ಜೀವನವನ್ನು ಅರ್ಥ ಮಾಡಿಕೊಳ್ಳಬೇಕು ಭಾವನಾತ್ಮಕ ಸಂಪತ್ತು ನಮ್ಮಲ್ಲಿರುವುದರಿಂದ ಪ್ರೇರಕಾಶಕ್ತಿಯಾಗಿ ಬಾಳಬಹುದು. ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ನಾವು ಕಳೆದುಕೊಂಡ ನಮ್ಮ ತನದ ಪ್ರಜ್ಞೆ, ಬಾಬು ಜಗಜೀವನ್ ರಾಮ್ ಆದರ್ಶಗಳು ನಮ್ಮ ಬದುಕಿಗೆ ದಾರಿದೀಪವಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ರಾಯಚೂರು ವಿವಿ ಕುಲಸಚಿವ ಪ್ರೊ.ವಿಶ್ವನಾಥ.ಎಮ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಅವರು, ವಿದ್ಯಾರ್ಥಿಗಳೇ ಈ ವಿಶ್ವವಿದ್ಯಾಲಯದ ರಾಯಭಾರಿಗಳು, ಡಾ.ಬಾಬು ಜಗಜೀವನರಾಮ ಅವರು ವ್ಯಕ್ತಿಗಳಾಗಿ ನಮಗೆ ಕೊಡುಗೆ ನೀಡಿದ್ದಾರೆ ಅವರಲ್ಲಿರುವ ವಿದ್ವತ್ ನಮಗೆ ಯಾವ ರೀತಿಯಲ್ಲಿ ಉಣಬಡಿಸಿದ್ದಾರೆ ಯಾವುದೇ ಜಾತಿಗೆ ಸೀಮಿತವಾಗದೆ ಎಲ್ಲರಿಗೂ ಅವರು ಸಮಾನ ಕೊಡುಗೆ ನೀಡಿದ್ದಾರೆ ಕೇವಲ ಆಚರಣೆ ಮಾಡದೆ ವಿದ್ಯಾರ್ಥಿಗಳಿಗೆ ಒಂದು ದಿನ ಕಾರ್ಯಾಗಾರದ ಅನುಕೂಲ ಮಾಡಿ ಅವರ ಕೊಡುಗೆ ಏನು ಎಂಬುವುದು ತಿಳಿಹೇಳುವುದಾಗಿದೆ ಆಧುನಿಕ ಭಾರತದ ಶಿಲ್ಪಿ ಬಾಬುಜೀ ಭಾರತ ಕಂಡಂತ ಅತ್ಯಂತ ಶ್ರೇಷ್ಠ ನಾಯಕ ದೇಶ ಕಟ್ಟೋ ಕೆಲಸಕ್ಕೆ ಇವರ ಕೊಡುಗೆ ಬಹಳ ಇದೆ ಎಂದು ಅವರು ಹೇಳಿದರು.
ಮೊದಲ ಗೋಷ್ಠಿಯಲ್ಲಿ ಡಾ.ಕೆ.ಆರ್.ದುರ್ಗಾದಾಸ್ ಅವರು ಆಧುನಿಕ ಭಾರತದ ಶಿಲ್ಪಿ-ಡಾ.ಬಾಬು ಜಗಜೀವನ ರಾಮ್ ಎಂಬ ವಿಷಯ ಕುರಿತು ಮಂಡನೆ ಮಾಡಿದರು. ಎರಡನೇ ಗೋಷ್ಠಿಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಜಿ.ಬಿ.ನಂದನ ಅವರು ಡಾ.ಬಾಬು ಜಗಜೀವನ ರಾಮ್ ರವರ ರಾಜಕೀಯ ಚಿಂತನೆಗಳ ಪ್ರಸ್ತುತತೆ ಎಂಬ ವಿಷಯ ಕುರಿತು ಮಂಡನೆ ಮಾಡಿದರು.
ರಾವಿವಿಯ ಕುಲಸಚಿವರು ಮೌಲ್ಯಮಾಪನ ಪ್ರೊ.ಯರಿಸ್ವಾಮಿ.ಎಂ. ಅವರು ಮಾತನಾಡುತ್ತಾ ಹತ್ತು ಪುಸ್ತಕಗಳನ್ನು ಓದುವುದಕ್ಕಿಂತಲೂ ನೂರಾರು ಅನುಭವಗಳನ್ನು ಹೊಂದಿದ ಒಬ್ಬ ವ್ಯಕ್ತಿಯ ವಿಚಾರವನ್ನು ಅರಿಯುವುದು ಉತ್ತಮ ಎನ್ನುತ್ತಾ ಬಾಬು ಜಗಜೀವನರಾಮ ಅವರ ಕುರಿತು ಸಾಕಷ್ಟು ಅಧ್ಯಯನ ಮಾಡಿದಂತಹ ಸಂಪನ್ಮೂಲ ವ್ಯಕ್ತಿಗಳನ್ನು ವಿಶ್ವವಿದ್ಯಾಲಯಕ್ಕೆ ಕರೆತಂದು ವಿದ್ಯಾರ್ಥಿಗಳಿಗೆ ಉಪನ್ಯಾಸಕರಿಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿ ವಿದ್ಯಾರ್ಥಿಗಳಲ್ಲಿ ಮೂಡಿದ ಸಾಕಷ್ಟು ಪ್ರಶ್ನೆಗಳಿಗೆ ಸಂವಾದದ ಮುಖಾಂತರ ಉತ್ತರ ಪಡೆದುಕೊಳ್ಳಲು ಚರ್ಚಾ ವೇದಿಕೆಯಾಗಿ ನಮ್ಮ ವಿಶ್ವವಿದ್ಯಾಲಯ ಸಾಕ್ಷಿಯಾಗಿದ್ದು ಇಂತಹ ಚರ್ಚಾ ವೇದಿಕೆಗಳು ಮತ್ತೆ ಮತ್ತೆ ಮೂಡಿಬರಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ಉಪಕುಲಸಚಿವರು ಹಾಗೂ ಕಾರ್ಯಕ್ರಮ ಸಂಯೋಜಕರಾದ ಡಾ.ಜಿ.ಎಸ್.ಬಿರಾದರ, ಕಾಲೇಜು ಶಿಕ್ಷಣ ಅಭಿವೃದ್ಧಿ ಮಂಡಳಿ ನಿರ್ದೇಶಕ ರಾಘವೇಂದ್ರ ಫತ್ತೇಪುರ, ಸಮಾಜ ವಿಜ್ಞಾನ ನಿಕಾಯ ಡೀನರಾದ ಪ್ರೊ.ನುಸ್ರತ್ ಫಾತಿಮಾ, ವಿಜ್ಞಾನ ನಿಕಾಯ ಡೀನರಾದ ಪ್ರೊ.ಪಾರ್ವತಿ ಸಿ.ಎಸ್., ಕಲಾ ಮತ್ತು ಶಿಕ್ಷಣ ನಿಕಾಯ ಡೀನರಾದ ಪ್ರೊ.ಪಿ.ಭಾಸ್ಕರ್, ಅರ್ಥಶಾಸ್ತ್ರ ವಿಭಾಗದ ಡಾ.ನಾಗರಾಜ, ಶಿವರಾಜ ಹಾಗೂ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ಲಕ್ಷ್ಮಣ ಅವರು ಡಾ.ಬಾಬು ಜಗಜೀವನರಾಮ ಅವರ ಕೀರ್ತಿ ಸಾರುವ ಗೀತೆ ಹಾಡಿದರು. ಶರಣಮ್ಮ ಪ್ರಾರ್ಥಿಸಿದರು, ಅತಿಥಿ ಉಪನ್ಯಾಸಕರಾದ ವಾಣಿಜ್ಯ ವಿಭಾಗದ ರೂಪ, ಇಂಗ್ಲೀಷ್ ವಿಭಾಗದ ಅನಿಲ್ ಅಪ್ರಾಳ, ಅರ್ಥಶಾಸ್ತ್ರ ವಿಭಾಗದ ದುರುಗಪ್ಪ ನಿರೂಪಿಸಿದರು, ಸಮಾಜಕಾರ್ಯ ವಿಭಾಗ ಡಾ.ರಶ್ಮೀರಾಣಿ ಅಗ್ನಿಹೋತ್ರಿ, ಕನ್ನಡ ವಿಭಾಗ ಡಾ.ಶಿವಲೀಲಾ, ಇತಿಹಾಸ ವಿಭಾಗದ ಡಾ.ಪದ್ಮಜಾ ದೇಸಾಯಿ ಸ್ವಾಗತಿಸಿ ಪುಷ್ಪಗುಚ್ಛ ಸ್ವಾಗತ ಕಾರ್ಯಕ್ರಮ ನೆರವೇರಿಸಿದರು. ಸಮಾಜಶಾಸ್ತ್ರ ವಿಭಾಗದ ಡಾ.ಶಕುಂತಲಾ ದೇವಿ ಮತ್ತು ಗಣಿತ ವಿಭಾಗದ ಡಾ.ಶ್ರೀನಿವಾಸ ಅತಿಥಿ ಪರಿಚಯ ನೀಡಿದರು. ಮಹಿಳಾ ಅಧ್ಯಯನ ವಿಭಾಗದ ಡಾ.ತಾಯಪ್ಪ, ಕನ್ನಡ ಅಧ್ಯಯನ ವಿಭಾಗದ ಉಪನ್ಯಾಸಕ ಡಾ.ಶಿವರಾಜ ಯತಗಲ್ ವಂದಿಸಿದರು.