ಯುವಕರ ಭವಿಷ್ಯಕ್ಕೆ ಬಿಜೆಪಿ, ಕಾಂಗ್ರೆಸ್ ಕೊಳ್ಳಿ ಹೆಚ್‌ಡಿಕೆ ವಾಗ್ದಾಳಿ

ಬೆಂಗಳೂರು,ಆ. ೨- ಕರಾವಳಿಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಬಡ ಕುಟುಂಬಗಳ ಯುವಕರನ್ನು ರಾಜಕೀಯ ದುರ್ಲಾಭಕ್ಕೆ ಬಳಸಿಕೊಳ್ಳುತ್ತಿವೆ. ಯುವಕರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ದೂರಿದ್ದಾರೆ.
ಕರಾವಳಿಯಲ್ಲಿ ನಡೆದ ಮೂವರು ಯುವಕರ ಹತ್ಯೆಯ ನಂತರ ಇಂದು ಸರಣಿ ಟ್ವೀಟ್ ಮಾಡಿರುವ ಅವರು ಸರ್ಕಾರ ಮತ್ತು ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಕರಾವಳಿಯಲ್ಲಿ ಯುವಕರ ಭವಿಷ್ಯಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕೊಳ್ಳಿ ಇಡುತ್ತಿವೆ ಎಂದಿದ್ದಾರೆ.
ಕರಾವಳಿಯಲ್ಲಿ ನಡೆದ ತ್ರಿವಳಿ ಕೊಲೆಗಳ ರಹಸ್ಯವನ್ನು ಬೇಧಿಸಿ ನೈಜ ಹಂತಕರನ್ನು ಹಿಡಿಯುವ ಬದಲು ಬಿಜೆಪಿ ಸರ್ಕಾರ ತಾನೇ ಮುಂದೆ ನಿಂತು ದಿನಕ್ಕೊಂದು ಕತೆ ಕಟ್ಟುತ್ತಿದೆ. ಕ್ಷಣಕ್ಕೊಂದು ಟ್ವಿಸ್ಟ್ ಕೊಡುತ್ತ ಜನರಿಗೆ ಸತ್ಯ ಹೇಳುತ್ತಿಲ್ಲ ಎಂದು ದೂರಿದ್ದಾರೆ.
ಆ. ೧೫ ರ ವೇಳೆಗೆ ಈ ಹತ್ಯೆಯ ನೈಜ ಕೊಲೆಗಡುಕರನ್ನು ಬಂಧಿಸದಿದ್ದರೆ ಶಾಂತಿಯುತ ಸತ್ಯಾಗ್ರಹ ಕೂರುತ್ತೇನೆ. ನನ್ನದು ಗಾಂಧಿಮಾರ್ಗ, ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿಯುವ ಪಕ್ಷಕ್ಕೆ ನೆತ್ತರ ಧಾರೆಯೇ ರಾಜಮಾರ್ಗ ಎನ್ನುವುದನ್ನು ಕರಾವಳಿ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ರಾಜ್ಯ ಬಿಜೆಪಿ ಪಕ್ಷದ ಪಕ್ಷಪಾತ ನೀತಿ ಕಣ್ಣಿಗೆ ರಾಚುವಂತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದುವರೆಗೂ ಮಸೂದ್ ಮತ್ತು ಫಾಜಲ್‌ರವರ ಮನೆಗೆ ಭೇಟಿ ನೀಡಿಲ್ಲ. ತಡವಾಗಿ ಜ್ಞಾನೋದಯವಾದಂತೆ ಈಗ ಇಬ್ಬರ ಮನೆಗೂ ಭೇಟಿ ನೀಡುವುದಾಗಿ ಹೇಳಿದ್ದಾರೆ ಎಂದು ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.