ಯುವಕರ ಬಗ್ಗೆ ಪಾಲಕರು ನಿಗಾ ವಹಿಸಿ-ಎಸ್.ಪಿ

ರಾಯಚೂರು,ಜೂ.೨೫-
ಯುವಕರು ಅಪರಾಧ ಚಟುವಟಿಕೆಗಳಲ್ಲಿ ತೊಡಗದೇ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಪಾಲಕರು ಯುವಕರ ಬಗ್ಗೆ ನಿಗಾಯಿರಿಸಿ ಸರಿ ದಾರಿಯಲ್ಲಿ ನಡೆಯುವಂತೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ಸಲಹೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಯುವಕರನ್ನು ಸರಿಯಾದ ಮಾರ್ಗದರ್ಶನ ನೀಡುವುದು ಅವಶ್ಯ. ಜಿಲ್ಲೆಯಲ್ಲಿ ಶೇ ೩೦ ರಷ್ಟು ಯುವಕರಿದ್ದು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಮನೆಗೆ ಬಾರದೇ ಇದ್ದಾಗ ವಿಚಾರಿಸಬೇಕು. ಕಾಲೇಜಿನ ಅವಧಿಯಲ್ಲಿ ದುಷ್ಚಟಗಳಿಗೆ ಬಲಿಯಾಗುವುದಕ್ಕೆ ಆರಂಭಿಕ ಹಂತದಲ್ಲಿಯೇ ಸರಿಯಾದ ಮಾರ್ಗದರ್ಶನ ನೀಡಬೇಕು. ಅಪರಾಧ ಚಟುವಟಿಕೆಗಳಲ್ಲಿ ಯುವಕರು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದು ದುರ್ದೈವದ ಸಂಗತಿ.
ಯುವಕರು ತಪ್ಪು ಮಾಡದಂತೆ ಮತ್ತು ಯಾವುದೇ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಕೊಳ್ಳದಂತೆ ಎಚ್ಚರ ವಹಿಸುವ ಮೂಲಕ ಅವರ ಜೀವನ ರೂಪಿಸುವಲ್ಲಿ ಪಾಲಕರು ಎಚ್ಚರ ವಹಿಸಬೇಕು.
೧೫ ರಿಂದ ೨೫ ವಯೋಮಿತಿಯ ಯುವಕರು ಇಂತಹ ಅಪಾಯಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಯುವಕರು ಶಾಲಾ, ಕಾಲೇಜಿಗೆ ತೆರಳಿದ ನಂತರ ನೇರವಾಗಿ ಮನೆಗೆ ಬಂದು ತಮ್ಮ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಅವರಿಗೆ ಮಾರ್ಗದರ್ಶನ ನೀಡಬೇಕು. ಇಲ್ಲದಿದ್ದರೆ ಸಂಜೆ ಅವರು ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳಿವೆ.
ಗುಂಪು ಕಟ್ಟಿಕೊಂಡು ಅನಗತ್ಯವಾಗಿ ಸುತ್ತುವುದನ್ನು ಪೊಲೀಸರು ಸಹಿಸುವುದಿಲ್ಲ. ಇಂತಹ ಪ್ರಕರಣ ನಿಯಂತ್ರಿಸಲು ವಿಶೇಷ ಬೀಟ್ ವ್ಯವಸ್ಥೆ ಮಾಡಲಾಗಿದೆ. ಒಮ್ಮೆ ಪೊಲೀಸ್ ಪ್ರಕರಣ ದಾಖಲಾದರೆ ಭವಿಷ್ಯದ ಮೇಲೆ ಸಮಸ್ಯೆಯಾಗುತ್ತದೆ. ಪೊಲೀಸರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಪದೇ ಪದೇ ಇಂಥ ಚಟುವಟಿಕೆಗಳು ತೊಡಗಿದರೆ ಅನಿವಾರ್ಯವಾಗಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಮಾಜದ ಮುಖಂಡರು ಇದ್ದರು.