ಯುವಕರ ಚೇತನ ವಿವೇಕಾನಂದರು

ಆನೇಕಲ್.ಜ೧೩-ತರುಣರಲ್ಲಿರುವ ಆಲಸ್ಯವನ್ನು ಬಡಿದೆಬ್ಬಿಸಿ ಕಾರ್ಯಪ್ರವೃತಿಯನ್ನಾಗಿ ಮಾಡುವ ಯುವಚೇತನ ವಿವೇಕಾನಂದರಾಗಿದ್ದಾರೆ ಎಂದು ಎಎಸ್ ಬಿ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ|| ಚಿನ್ನಪ್ಪ ಚಿಕ್ಕಹಾಗಡೆ ರವರು ತಿಳಿಸಿದರು.
ಅವರು ಪಟ್ಟಣದಲ್ಲಿ ಎಎಸ್ ಬಿ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಆಧ್ಯಾತ್ಮಿಕ ಸಂತನಾಗಿ ಧರ್ಮ ಪ್ರಚಾರಕರಾಗಿ ವಿವೇಕಾನಂದರು ಜಗತ್ತಿಗೆ ನೀಡಿರುವ ವಿಚಾರದಾರೆಗಳು ಸರ್ವಕಾಲಿಕವಾದವು ಶಿಕ್ಷಣ, ಆಧ್ಯಾತ್ಮದ ಮೂಲಕ ಜಗತ್ತಿನ ಜನರನ್ನು ಬಡಿದೆಬ್ಬಿಸಿದ ಸ್ವಾಮಿ ವಿವೇಕಾನಂದರು ಯುವ ಸಮುದಾಯದಿಂದ ಮಾತ್ರ ಭವ್ಯಬಾರತ ನಿರ್ಮಾಣ ಮಾಡಲು ಸಾಧ್ಯ ಎಂಬ ಪರಿಕಲ್ಪನೆಯೊಂದಿಗೆ ಜೀವನ ಸವೆಸಿದವರು. ಅಂಥವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಕೊಳ್ಳುವುದರ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಸಂಕಲ್ಪ ತೊಡಗಬೇಕು ಎಂದು ತಿಳಿಸಿದರು.
ಭಾರತೀಯರು ಅಜ್ಞಾನಿಗಳು ಎಂದು ತಿಳಿದಿದ್ದ ಅಮೇರಿಕನ್ನರಿಗೆ ವಿವೇಕಾನಂದರವರು ತನ್ನ ಮಾತಿನ ಚಾಣಾಕ್ಷತೆಯಿಂದ ಅಮೇರಿಕನ್ನರ ಮನಗೆದ್ದು ಭಾರತೀಯರು ಅವಿವೇಕಿಗಳಲ್ಲ ಬುದ್ದಿವಂತರು, ಶಕ್ತಿ ಸಾಮರ್ಥ್ಯವುಳ್ಳವರು ಎಂದು ಭಾರತದ ಹಿರಿಮೆಯನ್ನು ಎತ್ತಿಹಿಡಿದ ಏಕೈಕ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರಾಗಿದ್ದಾರೆ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಮಾತನಾಡಿ ಸ್ವಾಮಿ ವಿವೇಕಾನಂದರು ಒಬ್ಬ ವ್ಯಕ್ತಿಯಲ್ಲ ಭಾರತದ ಸಂಸ್ಕೃತೀಯ ಪ್ರತೀಕವಾಗಿದ್ದಾರೆ ಎಂದರು. ಭಾರತವು ಇಡೀ ಜಗತ್ತಿಗೆ ವೈಚಾರಿಕತಯಂತಹ ಪ್ರಾಚೀನ ಸಂಸ್ಕೃತಿ ಸಾರಿ ಹೇಳುವ ಪರಂಪರೆ ಹೊಂದಿದೆ ಇಂತಹ ಪರಂಪರೆಯು ಅಳಿಯದೆ ಉಳಿಯಬೇಕಾದರೆ ಇಂದಿನ ಯುವಕರು ಸ್ವಾಮಿ ವಿವೇಕಾನಂದರ ತತ್ವ ಸಿದ್ದಾಂತಗಳನ್ನು ಅರಿತು ಅವುಗಳನ್ನು ಜೀವನದಲ್ಲಿ ಸಾಗುವುದು ಸೂಕ್ತ ಎಂದರು.
ಕಾರ್ಯಕ್ರಮದಲ್ಲಿ ಎಎಸ್ ಬಿ ಹಳೆ ವಿದ್ಯಾರ್ಥಿಗಳ ಸಂಘದ ಖಚಾಂಚಿ ಗಿರೀಶ್, ಸಲಹಾ ಸಮಿತಿಯ ಅಧ್ಯಕ್ಷರಾದ ದವನಂ ದೇವರಾಜ್, ಸದಸ್ಯರಾದ ಲಷ್ಮೀಕಾಂತ್, ಬಾಬು, ಮುನಿರಾಜು ಮತ್ತಿತರು ಹಾಜರಿದ್ದರು.