ಯುವಕರ ಚಿಕಿತ್ಸೆಗೆ ಸಚಿವರ ಎಸ್ಕಾರ್ಟ್ ವಾಹನ ಬಳಕೆ

ಕೋಲಾರ, ಮಾ,೧೫- ತಾಲ್ಲೂಕಿನ ಅರಾಭಿಕೊತ್ತನೂರು ಸಮೀಪ ರಾಷ್ಟ್ರೀಯ ಹೆದ್ದಾರಿ-೭೫ರಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಯುವಕರನ್ನು ಸಚಿವ ಆರ್.ಅಶೋಕ ತಮ್ಮ ಎಸ್ಕಾರ್ಟ್ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟ ಘಟನೆ ನಡೆಯಿತು.
ಮಾಲೂರು ಪಟ್ಟಣ ಹಾಗೂ ತಾಲ್ಲೂಕಿನ ವಕ್ಕಲೇರಿಯಲ್ಲಿ ಭಾನುವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮುಗಿಸಿಕೊಂಡು ಅವರು ಬೆಂಗಳೂರಿಗೆ ತೆರಳುತ್ತಿದ್ದರು. ನಿಯಂತ್ರಣ ತಪ್ಪಿ ಕಾರು ಕುರುಚಲು ಕಾಡಿಗೆ ಬಿದ್ದಿದ್ದನ್ನು ಗಮನಿಸಿದರು. ಅಪಘಾತದಲ್ಲಿ ಗಾಯಗೊಂಡಿದ್ದ ಯುವಕರು ನರಳಾಡುತ್ತಿದ್ದರು.
ಅಶೋಕ್ ತಮ್ಮ ಕಾರು ನಿಲ್ಲಿಸಿ ಅಲ್ಲಿಗೆ ತೆರಳಿದ ಸಚಿವರು, ಆ ಯುವಕರನ್ನು ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ರಸ್ತೆಗೆ ಕರೆ ತಂದರು.
ನಾನೊಬ್ಬನೇ ಬೆಂಗಳೂರಿಗೆ ಹೋಗುತ್ತೇನೆ. ಎಸ್ಕಾರ್ಟ್ ವಾಹನ ಜೊತೆಗೆ ಬರುವುದು ಬೇಡ. ಈ ಯುವಕರನ್ನು ಕರೆದುಕೊಂಡು ಕೋಲಾರದ ಜಿಲ್ಲಾಸ್ಪತ್ರೆಗೆ ಸೇರಿಸಿ ಎಂದು ಸಚಿವರು, ಎಸ್ಕಾರ್ಟ್ ವಾಹನದ ಚಾಲಕರು ಹಾಗೂ ಪೊಲೀಸರಿಗೆ ಸೂಚಿಸಿದರು.
ಯುವಕರಿಬ್ಬರು ಕೋಲಾರದವರಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.ಸಂಸದ ಎಸ್.ಮುನಿಸ್ವಾಮಿ ಹಾಗೂ ಕೋಲಾರ ನಗರಸಭೆ ಸದಸ್ಯ ಪ್ರವೀಣ್ ಗೌಡ ಜೊತೆಗಿದ್ದು ಸಹಾಯ ಮಾಡಿದರು.