ಯುವಕರ ಅಭಿಮಾನಕ್ಕೆ ಬೆಲೆ ಕಟ್ಟಲಾಗದು ಕೆ.ಶಿವನಗೌಡ ನಾಯಕ

ದೇವದುರ್ಗ,ಜ.೦೯- ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಅವರ ಅಭಿಮಾನಿಗಳು ಲಕ್ಷಾಂತರ ರೂ. ವೆಚ್ಚ ಮಾಡಿ ಪುತ್ಥಳಿ ನಿರ್ಮಿಸಿದ್ದು ಶ್ಲಾಘನೀಯ. ಯುವಕರ ಈ ಅಭಿಮಾನಕ್ಕೆ ಬೆಲೆ ಕಟ್ಟಲಾಗದು ಎಂದು ಶಾಸಕ ಕಎ.ಶಿವನಗೌಡ ನಾಯಕ ಹೇಳಿದರು.
ತಾಲೂಕಿನ ರಾಮನಾಳ ಗ್ರಾಮದಲ್ಲಿ ಗ್ರಾಮದ ಯುವಕರು ಪ್ರತಿಷ್ಠಾಪಿಸಿದ್ದ ಸುಮಾರು ೮ಅಡಿ ಎಚ್ಚರದ ಡಾ.ಪುನೀತ್ ರಾಜಕುಮಾರ ಪುತ್ಥಳಿ ಅನಾವರಣಗೊಳಿಸಿ ಭಾನುವಾರ ಮಾತನಾಡಿದರು. ಊರಿನ ಗ್ರಾಮಸ್ಥರು ಹಾಗೂ ಪುನೀತ್ ರಾಜಕುಮಾರ ಅಭಿಮಾನಿಗಳು ಸೇರಿ ಸಣ್ಣ ಗ್ರಾಮದಲ್ಲಿ ಪುತ್ಥಳಿ ಸ್ಥಾಪನೆ ಮಾಡಿರುವುದು ಪುನೀತ್‌ರವರು ನಮ್ಮ ನಡುವೆ ಇನ್ನೂ ಇದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ರಾಜ್ಯದ ಮೂಲೆಮೂಲೆಗಳಲ್ಲಿ, ಗ್ರಾಮ ಗ್ರಾಮಗಳಲ್ಲಿ, ಮನೆಮನೆಗಳಲ್ಲಿ ಭಾವಚಿತ್ರ, ಪುತ್ಥಳಿಗಳು ಸ್ಥಾಪನೆ ಮಾಡುವುದು ನೋಡಿದರೆ ಅವರ ಜೀವನ ಆದರ್ಶಗಳು, ಸಾಮಾಜಿಕ ಕಳಕಳಿ ಕೆಲಸಗಳು ಇಂದಿಗೂ ಅವರನ್ನು ಜೀವಂತವಾಗಿ ಉಳಿಸಿದೆ. ಯುವಕರು ಪುನೀತ್ ರಾಜ್‌ಕುಮಾರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕನ್ನೂರು ಶ್ರೀಮಠದ ಶ್ರೀಗುರು ಕುಮಾರೇಶ್ವರ ಸ್ವಾಮೀಜಿ ಮಾತನಾಡಿ, ಗ್ರಾಮಸ್ಥರು ಪುನೀತ್ ರಾಜ್‌ಕುಮಾರ್ ಪುತ್ಥಳಿ ಸ್ಥಾಪನೆ ಮಾಡುವ ಮೂಲಕ ಅವರ ಅಭಿಮಾನವನ್ನು ಎಲ್ಲರೂ ಕೊಂಡಾಡುವಂತೆ ಮಾಡಿದ್ದಾರೆ. ಪುನೀತ್ ನಿಜ ಜೀವನದ ಆದರ್ಶಗಳು, ಚಲನಚಿತ್ರ ಸಂದೇಶಗಳನ್ನು ನಾವುಗಳು ಅಳವಡಿಸಿಕೊಂಡು ಜೀವನ ಸಾಗಿಸಬೇಕಾಗಿದೆ. ಇತ್ತೀಚೆಗೆ ನಿಧನರಾದ ಈ ನಾಡಿನ ಸರಳ ಸಂತ ಶ್ರೀಸಿದ್ಧೇಶ್ವರ ಸ್ವಾಮೀಜಿಗಳ ಆದರ್ಶಗಳು ಸಹ ಎಲ್ಲರಿಗೂ ಪ್ರೇರಣೆ, ಇಂದು ಗ್ರಾಮಸ್ಥರು ಎಲ್ಲರೂ ಸೇರಿ ಇಂಥ ಅದ್ಭುತವಾಗಿ ಕಾರ್ಯಕ್ರಮ ನಡೆಸುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ಗ್ರಾಮದ ಯುವಕರು, ಅಭಿಮಾನಿಗಳು ಇದ್ದರು.