ಯುವಕರು ಸ್ವಚ್ಛತೆಯ ರಾಯಭಾರಿಗಳಾಗಲಿ-ಉಪ್ಪಳಪ್ಪ

ಲಿಂಗಸುಗೂರು.ಜು.೨೪- ಯುವಕರು ಗ್ರಾಮೀಣ ಭಾಗದಲ್ಲಿ ಆರೋಗ್ಯ ಹಾಗೂ ಸ್ವಚ್ಛತೆಯ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸುವ ರಾಯಭಾರಿಗಳಂತೆ ಕೆಲಸ ಮಾಡುವ ಅಗತ್ಯವಿದೆ ಎಂದು ಸರಕಾರಿ ಆಸ್ಪತ್ರೆಯ ಪ್ರಯೋಗಶಾಲಾ ಅಧಿಕಾರಿ ಉಪ್ಪಳಪ್ಪ ಅಭಿಪ್ರಾಯಪಟ್ಟರು.
ಶ್ರೀ ಸಂಗಮೇಶ್ವರ ಪದವಿ ಮಹಾವಿದ್ಯಾಲಯದಿಂದ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಯುವಕರು ಸ್ವತಃ ತಮ್ಮ ಆರೋಗ್ಯದ ಜೊತೆಗೆ ಗ್ರಾಮೀಣ ಜನತೆಯ ಆರೋಗ್ಯದ ಬಗ್ಗೆಯೂ ಹೆಚ್ಚಿನ ಆಸ್ಥೆ ವಹಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಕಲುಷಿತ ಗಾಳಿ, ನೀರು, ಆಹಾರ ಮತ್ತು ಇತರೆ ಮೂಲಗಳಿಂದ ರೋಗಗಳು ಬರುವ ಸಾಧ್ಯತೆ ಇರುವುದರಿಂದ ಜಾಗರೂಕತೆಯಿಂದ ಇರಬೇಕು. ಸದೃಢ ಆರೋಗ್ಯಕ್ಕೆ ದುಶ್ಚಟಗಳು ಮಾರಕವಾಗಿದ್ದು, ದುಶ್ಚಟಗಳಿಂದ ದೂರವಿದ್ದು ಸಮೃದ್ಧ ಬದುಕು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸರಕಾರಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ದಿಗಂಬರ್ ಹೇರೂರು ಕಾರ್ಯಕ್ರಮ ಉದ್ಘಾಟಿಸಿದರು. ರವೀಂದ್ರ ಬಳಿಗಾರ, ಧನ್ವಂತರಿ ಆಸ್ಪತ್ರೆಯ ವೈದ್ಯ ಡಾ. ಎಸ್. ಆರ್ ಪಾಟೀಲ, ಪ್ರಾಚಾರ್ಯ ಬಸವರಾಜ ವೈ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸರೋಜಿನಿದೇವಿ ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರಾ.ಸೇಯೋ ಅಧಿಕಾರಿ ಭೀಮಸಿಂಗ್ ನಾಯ್ಕ್, ಪ್ರಾಧ್ಯಾಪಕರಾದ ಡಿ.ಕೆ ಮುಜಾವರ್, ಶ್ರೀಮತಿ ಶಾಂತಮ್ಮ ಪಾಟೀಲ, ಡಾ.ಕೆ. ಶಶಿಕಾಂತ, ಮಹಾಂತೇಶ ಚಂಚಿ, ಬಸವರಾಜ ಖೈರವಾಡಗಿ, ಬೀರಪ್ಪ ಜಗ್ಗಲ್, ನಿರುಪಾದಿ ಖೈರವಾಡಗಿ, ಮಂಜುನಾಥ ಪಾಟೀಲ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.