ಯುವಕರು, ಮಹಿಳೆಯರಿಗೆ ಸ್ವಯಂ ಉದ್ಯೋಗ; ಸಿಎಂ ಪ್ರಕಟ

ಬೆಂಗಳೂರು,ಜು.೨೮- ತಮ್ಮ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ವವರ್ಗಗಳ ಕಲ್ಯಾಣಕ್ಕೆ ಒತ್ತು ನೀಡಿ ಸಮೃದ್ಧ ಕರ್ನಾಟಕ ಕಟ್ಟುವ ಸಂಕಲ್ಪದೊಂದಿಗೆ ನೂತನ ಯೋಜನೆಗಳನ್ನು ಇಂದು ಪ್ರಕಟಿಸಿದ್ದು, ಯುವಕರು ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ಒದಗಿಸುವ ವಿಶೇಷ ಯೋಜನೆ, ನೇಕಾರರು, ಮೀನುಗಾರರು ಹಾಗೂ ಟ್ಯಾಕ್ಸಿ ಚಾಲಕರಿಗೆ ವಿದ್ಯಾನಿಧಿ ಯೋಜನೆ ವಿಸ್ತರಣೆ, ಪುಣ್ಯಕೋಟಿ ದತ್ತು ಯೋಜನೆಗಳನ್ನು ಜಾರಿ ಮಾಡುವ ಘೋಷಣೆ ಮಾಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಸಚಿವ ಸಂಪುಟದ ಸಚಿವರುಗಳ ಜತೆ ಸುದ್ಧಿಗೋಷ್ಠಿ ನಡೆಸಿ ಸರ್ಕಾರದ ಸಾಧನೆಗಳು ಹಾಗೂ ಹೊಸ ಯೋಜನೆಗಳ ಬಗ್ಗೆ ವಿವರ ನೀಡಿದ ಮುಖ್ಯಮಂತ್ರಿಗಳು,
ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಜನಪರ ಆಡಳಿತ ನೀಡುವ ಮೂಲಕ ಆರ್ಥಿಕತೆಯಲ್ಲಿ ಚೈತನ್ಯ ತಂದು ಸರ್ವರ ಸಮೃದ್ಧಿಗೆ ಸಮಗ್ರ ಯೋಜನೆಗಳನ್ನು ಜಾರಿಗೊಳಿಸಿ, ಕಳೆದ ಒಂದು ವರ್ಷದಲ್ಲಿ ಪ್ರಗತಿಪರ ಚಿಂತೆಯುಳ್ಳ ಸರ್ಕಾರವಾಗಿ ಏನೆಲ್ಲಾ ಮಾಡಲು ಸಾಧ್ಯವಿದೆಯೋ ಅದನ್ನೆಲ್ಲ ಮಾಡಿದ್ದೇವೆ. ಯೋಜನಾಬದ್ಧವಾದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ಇಡೀ ದೇಶದಲ್ಲೇ ರೈತರ ಮಕ್ಕಳಿಗಾಗಿ ಜಾರಿ ಮಾಡಲಾಗಿದ್ದ ವಿದ್ಯಾನಿಧಿ ಯೋಜನೆಯನ್ನು ಇಂದಿನಿಂದ ನೇಕಾರರು, ಮೀನುಗಾರರು ಹಾಗೂ ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿಸ್ತರಿಸಲಾಗಿದೆ. ಇದರಿಂದ ೧೦ ರಿಂದ ೧೨ ಸಾವಿರ ನೇಕಾರರ ಮಕ್ಕಳಿಗೆ ೫೦ ಸಾವಿರ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಹಾಗೂ ಸಾವಿರಾರು ಮೀನುಗಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗಲಿದೆ ಎಂದರು.
ಗೋ ಶಾಲೆಗಳಲ್ಲಿರುವ ಗೋವುಗಳ ಸಂರಕ್ಷಣೆಗೆ ಪುಣ್ಯಕೋಟಿ ದತ್ತು ಯೋಜನೆಯನ್ನೂ ಇಂದಿನಿಂದ ಜಾರಿ ಮಾಡಲಾಗಿದೆ ಎಂದರು.
ಸ್ತ್ರೀ ಶಕ್ತಿ ಸಂಘಗಳಲ್ಲಿನ ಮಹಿಳೆಯರಿಗೆ ೧.೫ ಲಕ್ಷ ಮೂಲ ಧನ ನೀಡಿ, ಆ ಮೂಲಕ ಸ್ವಯಂ ಉದ್ಯೋಗ ಕಲ್ಪಿಸಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಯೋಜನೆಯ ಮಾದರಿಯಲ್ಲೇ ಪ್ರತಿ ಗ್ರಾಮಗಳಲ್ಲೂ ಸ್ವಾಮಿವಿವೇಕಾನಂದ ಸಂಘಗಳನ್ನು ಸ್ಥಾಪಿಸಿ ಪ್ರತಿ ಗ್ರಾಮಗಳಲ್ಲೂ ೧೦೦ ಯುವಕರಿಗೆ ಉದ್ಯೋಗ ರೂಪಿಸುವ ಯೋಜನೆಯನ್ನು ಇಂದಿನಿಂದ ಜಾರಿ ಮಾಡುತ್ತಿರುವುದಾಗಿ ಅವರು ಘೋಷಿಸಿದರು.
ಕಳೆದ ಒಂದು ವರ್ಷದಲ್ಲಿ ನಾವು ಏನೆಲ್ಲ ಕೆಲಸ ಮಾಡಿದ್ದೇವೆ ಎಂದು ಹೇಳುವುದು ನಮ್ಮ ಉತ್ತರದಾಯಿತ್ವ, ಹಾಗೆಯೇ ಇನ್ನೊಂದು ವರ್ಷ ನಾವು ಏನು ಮಾಡುತ್ತೇವೆ ಎಂದು ಜನರಿಗೆ ಹೇಳುವುದು ನಮ್ಮ ಕರ್ತವ್ಯ. ಅದರಂತೆ ಈ ಹೊಸ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ.
ಹಾಗೆಯೇ ಬಜೆಟ್‌ನಲ್ಲಿ ಘೋಷಿಸಿದ ಎಲ್ಲ ಯೋಜನೆಗಳೂ ಅನುಷ್ಠಾನಗೊಂಡಿವೆ. ಸರ್ಕಾರಿ ಆದೇಶಗಳು ಹೊರ ಬಿದ್ದಿವೆ ಎಂದರು. ಆಡಳಿತ ಯಾರ ಪರವಾಗಿದೆ ಎನ್ನುವುದು ಬಹಳ ಮುಖ್ಯ. ರಾಜ್ಯದ ಸಮಗ್ರ ಅಭಿವೃದ್ಧಿಗೆ ನಾವು ಆಡಳಿತ ನೀಡಿದ್ದೇವೆ. ಎಲ್ಲ ವರ್ಗದ ಹಿತವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳು ಜಾರಿಯಾಗಿವೆ.
ಹೊಲದಲ್ಲಿ ದುಡಿಯುವ ರೈತ, ಕೂಲಿ ಕಾರ್ಮಿಕರಿಂದ ಹಿಡಿದು, ಉದ್ಯಮಗಳಲ್ಲಿ ಉದ್ಯೋಗ ಸೃಷ್ಟಿ ಮಾಡುವವರು, ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳೂ ಸೇರಿದಂತೆ ಸರ್ವರ ವಿಕಾಸವಾಗುವ ಕರ್ನಾಟಕ ಕಟ್ಟುವ ಕೆಲಸ ಮಾಡಿದ್ದೇವೆ ಎಂದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆ ಮಾದರಿಯಲ್ಲೇ ಮಹತ್ವಾಕಾಂಕ್ಷಿ ತಾಲ್ಲೂಕುಗಳನ್ನು ಗುರುತಿಸಿ, ೧೦೭ ತಾಲ್ಲೂಕುಗಳಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಹೊಸದಾಗಿ ೮ ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ವಿವೇಕಾ ಎಂದು ಹೆಸರಿಟ್ಟಿದ್ದೇವೆ ಎಂದರು.
ಪರಿಶಿಷ್ಟ ಜಾತಿ ವರ್ಗದವರಿಗೆ ೭೫ ಯುನಿಟ್ ಉಚಿತ ವಿದ್ಯುತ್ ನೀಡುತ್ತಿದ್ದು, ಈ ಯೋಜನೆಯ ನೇರ ಹಣ ವರ್ಗಾವಣೆ ಇಂದಿನಿಂದ ಆರಂಭವಾಗಿದೆ ಎಂದರು.
ಆರೋಗ್ಯ ವಲಯದಲ್ಲೂ ಸರ್ಕಾರ ಹೆಚ್ಚಿನ ಸಾದನೆ ಮಾಡಿದೆ. ನೂರು ಪಿಹೆಚ್‌ಇ ಸೆಂಟರ್‌ಗಳನ್ನು ಸಿಹೆಚ್‌ಸಿಗಳಾಗಿ ಮೇಲ್ದರ್ಜೆಗೇರಿಸುವ ಕೆಲಸಕ್ಕೂ ಚಾಲನೆ ನೀಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ವಲಯದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಕೆಲಸವನ್ನೂ ಸರ್ಕಾರ ಮಾಡಿದೆ ಎಂದರು.
ಸಂಧ್ಯಾ ಸುರಕ್ಷಾ ಯೋಜನೆಯಡಿ ವಯಸ್ಸಾದವರಿಗೆ, ಅಂಗವಿಕರಿಗೆ ಮಾಸಾಶನ ಏರಿಸಿದ್ದೇವೆ. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರ ಗೌರವಧನ ಆದೇಶವೂ ಹೊರ ಬಿದ್ದಿದೆ ಎಂದರು.
ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು ನಗರಗಳಲ್ಲಿ ನೂತನ ಹೈ ಟೆಕ್ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ವಸತಿ ಒದಗಿಸಲು ಸರ್ಕಾರ ಗಮನ ನೀಡಿದ್ದರು, ೫ ಲಕ್ಷ ಬಸವ ವಸತಿ ಮನೆ ನಿರ್ಮಾಣಕ್ಕೂ ಮಂಜೂರಾತಿ ನೀಡಲಾಗಿದೆ.
ಪಿಎಂಜಿಎಸ್‌ವೈ ಬಿಟ್ಟು ರಾಜ್ಯದಲ್ಲಿ ಸರ್ಕಾರ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಿದೆ. ಕೊಳೆಗೇರಿ ಮಂಡಳೀ ೪ ಲಕ್ಷ ಮನೆ ನಿರ್ಮಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ ೧ ಲಕ್ಷ ಮನೆ ನಿರ್ಮಾಣದ ಗುರಿ ಹೊಂದಿದ್ದೇವೆ. ಹಾಗೆಯೇ ಈ ಡಿಸೆಂಬರ್ ಒಳಗೆ ೪ ಲಕ್ಷ ಮನೆಗಳನ್ನು ಸಂಪೂರ್ಣಗೊಳಿಸುವ ಗುರಿಯನ್ನು ಸಾಧಿಸಲಾಗುವುದು ಎಂದರು.
ಬೆಂಗಳೂರು ನಗರದ ಅಭಿವೃದ್ಧಿಗೂ ೬ ಸಾವಿರ ಕೋಟಿ ರೂ. ಒದಗಿಸಲಾಗಿದೆ. ಉಪನಗರ ರೈಲು ಯೋಜನೆಗೆ ಚಾಲನೆ ನೀಡಲಾಗಿದೆ. ಹೊರ ವರ್ತುಲ ರಸ್ತೆ ನಿರ್ಮಾಣವೂ ಸದ್ಯದಲ್ಲೇ ಆರಂಭವಾಗಲಿದ್ದು, ಹೆಬ್ಬಾಳ ಮತ್ತು ಗೊರಗುಂಟೆ ಪಾಳ್ಯದ ಮೇಲ್ಸೇತುವೆ ನಿರ್ಮಾಣ ಕಾರ್ಯಗಳು ಆರಂಭವಾಗಲಿವೆ. ಹೀಗೆ ಸಮಸ್ಯೆ ಇದ್ದ ಕಡೆ ಸರ್ಕಾರ ಸ್ಪಂದಿಸಿದೆ ಎಂದರು.
ಕಳೆದ ಒಂದು ವರ್ಷದಲ್ಲಿ ಕರ್ನಾಟಕಕ್ಕೆ ಅತೀ ಹೆಚ್ಚು ವಿದೇಶಿ ನೇರ ಬಂಡವಾಳ ಹರಿದು ಬಂದಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ರಾಜ್ಯ ದೇಶದಲ್ಲೇ ನಂ ೧ನೇ ಸ್ಥಾನದಲ್ಲಿದೆ. ಆವಿಷ್ಕಾರ ವಲಯದಲ್ಲೂ ನಂ ೧ ಆಗಿದೆ ಎಂದರು.
ಕಡತ ವಿಲೇವಾರಿ
ಸರ್ಕಾರದಲ್ಲಿ ಕಡತ ವಿಲೇವಾರಿ ವಿಳಂಬವಾಗುತ್ತಿದೆ ಎಂಬುದನ್ನು ತಳ್ಳಿ ಹಾಕಿದ ಮುಖ್ಯಮಂತ್ರಿಗಳು, ಕಡತ ವಿಲೇವಾರಿಯಾಗುತ್ತಿಲ್ಲ ಎಂಬುದು ಸುಳ್ಳು, ಕಾಲ ಕಾಲಕ್ಕೆ ಕಡತಗಳ ವಿಲೇವಾರಿಯಾಗುತ್ತಿದೆ. ಕೆಲ ವರ್ಗಾವಣೆ ಕಡತಗಳಷ್ಟೇ ಬಾಕಿ ಇವೆ ಎಂದು ಸ್ಪಷ್ಟಪಡಿಸಿದರು.
ನೂರಕ್ಕೆ ನೂರು ಅಂಕ
ಒಂದು ವರ್ಷದ ಸಾಧನೆಗೆ ಎಷ್ಟು ಅಂಕ ಕೊಡಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಜನ ನಮ್ಮ ಸರ್ಕಾರಕ್ಕೆ ಜನ ನೂರಕ್ಕೆ ನೂರು ಅಂಕ ಕೊಡುತ್ತಾರೆ ಎಂದರು.
ರಾಜ್ಯದ ಬಿಜೆಪಿ ಸರ್ಕಾರ ಒಳ್ಳೆಯ ಆಡಳಿತ ನೀಡಲು ವಿಫಲವಾಗಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದಾಗ ಜನರಿಗೆ ಅವರ ಭಾಗ್ಯ ಯೋಜನೆಗಳು ಮುಟ್ಟಲಿಲ್ಲ, ಕಾಂಗ್ರೆಸ್‌ನವರು ಜನರಿಗೆ ಮುಟ್ಟಿಸಿದ್ದು ಕೇವಲ ದೌರ್ಭಾಗ್ಯ ಮಾತ್ರ ಅದಕ್ಕಾಗಿ ಚುನಾವಣೆಯಲ್ಲಿ ೧೨೦ ಸ್ಥಾನದಿಂದ ೮೦ಕ್ಕಿಳಿದರು ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಸಚಿವರುಗಳಾದ ಗೋವಿಂದ ಕಾರಜೋಳ, ವಿ. ಸೋಮಣ್ಣ, ಆರ್. ಅಶೋಕ್, ಮಾಧುಸ್ವಾಮಿ, ಮುರುಗೇಶ್ ನಿರಾಣಿ, ಸಿ.ಸಿ ಪಾಟೀಲ್, ಅರಗ ಜ್ಞಾನೇಂದ್ರ, ಡಾ. ಸಿ.ಎನ್ ಅಶ್ವತ್ಥನಾರಾಯಣ, ಗೋಪಾಲಯ್ಯ, ಮುನಿರತ್ನ, ಬಿ. ಶ್ರೀರಾಮುಲು, ಎಂ.ಟಿ.ಬಿ ನಾಗರಾಜ್, ಪ್ರಭುಚೌಹಾಣ್, ನಾರಾಯಣಗೌಡ, ಡಾ. ಕೆ. ಸುಧಾಕರ್,ಎಸ್.ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್, ಬಿ.ಸಿ ನಾಗೇಶ್ ಸೇರಿದಂತೆ ಹಲವು ಸಚಿವರು, ಶಾಸಕರು ಉಪಸ್ಥಿತರಿದ್ದರು.