ಯುವಕರು ದೇಶಾಭಿವೃದ್ಧಿಗೆ ಕೈಜೋಡಿಸಲಿ

ಬೀದರ್:ಜ.21: ಇಂದಿನ ಯುವಕರು ಜೀವನದಲ್ಲಿ ಶಿಸ್ತು ಹಾಗೂ ಸಂಯಮ ಕಾಪಾಡಿಕೊಂಡು ದೇಶಾಭಿವೃದ್ಧಿಗೆ ಕೈಜೋಡಿಸಬೇಕಿದೆ ಎಂದು ಬಿವಿಬಿ ಪದವಿ ಕಾಲೇಜಿನ ಪ್ರಾಚಾರ್ಯ ಮೇಜರ್ ಪಿ.ವಿಠಲ್ ರೆಡ್ಡಿ ಹೇಳಿದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಬೀದರ್ ಶಾಖೆಯ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಜತೆಗೆ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ತೋರಿಸಬೇಕು ಎಂದು ತಿಳಿಸಿದರು.
ಚಿಂತಕ ವಿನೋದ ಹೊನ್ನಾ ಮಾತನಾಡಿ, ಯುವಕರು ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳನ್ನು ಮಾದರಿಯಾಗಿಟ್ಟುಕೊಂಡು, ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಡಾ.ನಾಗೇಶ ಪಾಟೀಲ, ಉಪಾಧ್ಯಕ್ಷ ಡಾ. ಸವಿತಾ ಚಾಕೋತೆ, ಸಿದ್ದಾರ್ಥ ಪದವಿ ಕಾಲೇಜಿನ ಪ್ರಾಚಾರ್ಯ ಗೋಪಾಲ ಬಡಿಗೇರ, ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಮಾತನಾಡಿದರು.
ಎಫ್‍ಪಿಐ ಕಾರ್ಯಕ್ರಮ ಅಧಿಕಾರಿ ವಿಜಯಲಕ್ಷ್ಮಿ ಹುಡುಗೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಲೆಕ್ಕಿಗ ನವ್ಯ ಕಿರೋನ್ ಸ್ವಾಗತಿಸಿದರು. ಅಂಕಿ-ಸಂಖ್ಯಾಧಿಕಾರಿ ವಿನಾಯಕ ಕುಲಕರ್ಣಿ ವಂದಿಸಿದರು.