ಯುವಕರು ಕೃಷಿ ಉದ್ಯಮಿಗಳಾಗುವತ್ತ ಚಿತ್ತಹರಿಸಿ

ಕಲಬುರಗಿ:ಅ.19: ಕೃಷಿ ಮತ್ತು ರೈತ ದೇಶದ ಬೆನ್ನೆಲುಬು. ಜಗತ್ತಿಗೆ ಅನ್ನವನ್ನು ನೀಡಿ ಬದುಕಿಸುವ ರೈತ ತನ್ನ ಕಾಯಕದಿಂದ ದೂರ ಸರಿದರೆ ದೇಶಕ್ಕೆ ಆಪತ್ತು ತಪ್ಪಿದ್ದಲ್ಲ. ಯುವಕರು ನೌಕರಿ, ಉದ್ಯಮದತ್ತಲೇ ಮುಖ ಮಾಡುವುದರ ಬದಲಿಗೆ ಕೃಷಿಯಲ್ಲಿ ತೊಡಗಿ, ಹೊಸ ತಂತ್ರಜ್ಞಾನಗಳ ಬಳಕೆಯೊಂದಿಗೆ ಹೆಚ್ಚಿನ ಇಳುವರಿ ಪಡೆದು, ಉತ್ತಮ್ತ ಬೆಲೆಗೆ ಮಾರಾಟ ಮಾಡಿ ಕೃಷಿಯನ್ನು ಉದ್ಯಮವನ್ನಾಗಿಸುವುದು ಇಂದಿನ ಅಗತ್ಯವಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ ಹೇಳಿದರು.
ತಾಲೂಕಿನ ಕಲ್ಲಬೇನೂರ್ ಗ್ರಾಮದ ಯುವ ರೈತ ಸಾಧಕ ಬಸವರಾಜ ದೇಸಾಯಿ ಚೆಂಡು ಹೂ ತೋಟಕ್ಕೆ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ಕ್ಷೇತ್ರ ಭೇಟಿ ಕಾರ್ಯಕ್ರಮ ಮತ್ತು ಯುವ ರೈತ ಸಾಧಕರಿಗೆ ಏರ್ಪಡಿಸಲಾಗಿದ್ದ ಸತ್ಕಾರದಲ್ಲಿ ಅವರು ಮಾತನಾಡಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಯುವ ರೈತ ಸಾಧಕ ಬಸವರಾಜ ದೇಸಾಯಿ, ನಾನು ಐಟಿಐ ಕೋರ್ಸ್ ಮುಗಿಸಿ ಕೆಲವು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಪ್ರಸ್ತುತವಾಗಿ ಕೆಲವು ವರ್ಷಗಳಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಕೃಷಿಯ ಬಗ್ಗೆ ನಿರ್ಲಕ್ಷ ವಹಿಸದೆ, ಆಸಕ್ತಿಯಿಂದ ಕಾಯಕ ಮಾಡಿದರೆ ಅದರಲ್ಲಿ ಉತ್ತಮವಾದ ಸಾಧನೆ ಮಾಡಲು ಸಾಧ್ಯವಿದೆ. ರೈತರು ಕೃಷಿ ವಿಜ್ಞಾನಿಗಳಿಂದ ಮಾಹಿತಿಯನ್ನು ಪಡೆದು ಕೃಷಿ ಚಟುವಟಿಕೆ ಮಾಡುವುದು ಉತ್ತಮ. ಮಳೆ ನೀರಿನ ಕೊಯ್ಲು, ವೈಜ್ಞಾನಿಕ ಬೆಳೆ ಪದ್ದತಿ, ಬೆಳೆ ನಿರ್ವಹಣೆ, ಬಿತ್ತನೆ ಪದ್ದತಿ, ರೋಗಗಳ ನಿಯಂತ್ರಣ ಸೇರಿದಂತೆ ಕೃಷಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ತಜ್ಞರಿಂದ ಮಾಹಿತಿ ಪಡೆದು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಮಹದೇವಪ್ಪ ಎಚ್.ಬಿರಾದಾರ, ಸಂಗಣ್ಣ ಚಂಡ್ರಾಸೆ, ಬಸವರಾಜ, ಚನ್ನವೀರ, ಅಭಿಶೇಕ್ ಸೇರಿದಂತೆ ಮತ್ತಿತರರಿದ್ದರು.