ಯುವಕರು ಈ ದೇಶದ ಶಕ್ತಿ : ಕು.ಚೈತ್ರಾ ಕುಂದಾಪುರ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಮಾ.01 ಜಗತ್ತಿನಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿದ ದೇಶ ಭಾರತ ಅವರೇ ಶಕ್ತಿ ಎಂದು ತಿಳಿದುಕೊಂಡಿದ್ದೇವೆ ಯುವಶಕ್ತಿ ದೇಶ ಕಟ್ಟುವ ನಿಟ್ಟಿನಲ್ಲಿ ತೊಡಗಿಸಿಕೊಂಡು ಭಾರತ ಮಾತೆಯನ್ನು ರಕ್ಷಿಸಬೇಕಿದೆ ಎಂದು ವಾಗ್ಮಿ ಕು.ಚೈತ್ರಾ ಕುಂದಾಪುರ ಹೇಳಿದರು.
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಯುವಜನ ಸಮಿತಿಯಿಂದ ಸೋಮವಾರ ಸಂಜೆ ನಡೆದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶಕ್ಕಾಗಿ ಜೀವವಲ್ಲ, ಜೀವನ ನೀಡಬೇಕಿದೆ. ಕಾಲಕ್ಕೆ ತಕ್ಕಂತೆ ಬದಲಾಗಿ ಭಾರತದ ಭವಿಷ್ಯವನ್ನು ಬೆಳಗಬೇಕಿದೆ. ಆತ್ಮವಿಶ್ವಾಸ, ನಿಶ್ಚಿತ ಗುರಿಯನ್ನು ಇಟ್ಟುಕೊಂಡರೆ ಎಂತಹ ಸವಾಲನ್ನು ಕೂಡ ಎದುರಿಸಬಹುದು. ಭಾರತವನ್ನು ಮುಂಚೂಣಿ ರಾಷ್ಟವನ್ನಾಗಿ ಬೆಳಗಿಸಬೇಕು. ಭಾರತೀಯರು ಸಂಸ್ಕೃತಿ, ಸಂಸ್ಕಾರದಿಂದಲೂ ಶ್ರೀಮಂತರಾಗಿದ್ದಾರೆ. ಬದುಕಿನ ಆಟವನ್ನು ಗೆಲ್ಲುವ ಸಲುವಾಗಿ ಆಡಬೇಕು. ಇಟ್ಟ ಹೆಜ್ಜೆಯನ್ನು ಹಿಂದಿಡದೆ ಹೋರಾಡಬೇಕು. ಯುವಜನೋತ್ಸವದ ಮೂಲಕ ದೇಶದ ಭವಿಷ್ಯವೇ ಹೊಸ ಮನ್ವಂತರದತ್ತ ಸಾಗಲಿದೆ ಎಂದು ತಿಳಿಸಿದರು. ಗದ್ದಿಕೇರಿ ಚರಂತೇಶ್ವರ ಸ್ವಾಮೀಜಿ, ಹಬೊಹಳ್ಳಿಯ ಹಾಲಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ದಿ.ಚನ್ನಬಸವನಗೌಡ್ರು ಕುಟುಂಬವನ್ನು, ಚಿತ್ರಕಲಾ ಶಿಕ್ಷಕರಾದ ಆನಂದ ಕಡ್ಲಿ, ಯುವ ವಿಜ್ಞಾನಿ ತಳವಾರ ಕೊಟ್ರೇಶ, ಕರಾಟೆ ಮಾಸ್ಟರ್ ಸುಭಾಷ್‍ಚಂದ್ರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕರಾದ ಸುಭಾಷ್‍ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಹುಲ್ ಸ್ವಾಗತಿಸಿದರು. ಶಿಕ್ಷಕ ಶಿವಶಂಕ್ರಯ್ಯ ನಿರ್ವಹಿಸಿದರು.