ಯುವಕರಿಗೆ ಹೆಚ್ಚಿನ ಟಿಕೆಟ್ ನೀಡಬೇಕು :ಪ್ರತಾಪ್ ಸಿಂಹ

ವಿಜಯಪುರ,ಮಾ 5: ಈ ಬಾರಿಯ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಬೇಕು ಎಂದು ಮೈಸೂರ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಜನರಿಗೆ ಹೆಚ್ಚಿಗೆ ಟಿಕೆಟ್ ನೀಡಬೇಕು ಎಂದು ಮಾಧ್ಯಮದವರೂ ಗಟ್ಟಿ ಧ್ವನಿ ಹೊರಡಿಸಬೇಕು ಎಂದು ಹೇಳಿದರು.ನಾನು ಯುವಕರ ಪರವಾಗಿ ಇದ್ದೇನೆ. ಹೆಚ್ಚಿನ ಟಿಕೇಟ್ ಯುವಕರಿಗೆ ಸಿಗಬೇಕು. ಯಾವ ಪಕ್ಷವಾದರೂ ಸರಿ. ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.
ಅಧಿಕಾರಕ್ಕೆ ಬಂದರೆ ಸಾರ್ವಜನಿಕರಿಗೆ 10 ಕೆಜಿ ಉಚಿತ ಅಕ್ಕಿ ವಿತರಿಸುವುದಾಗಿ ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಘೋಷಣೆ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನ ಮಂತ್ರಿ ಅನ್ನ ಕಲ್ಯಾಣ ಯೋಜನೆಯಲ್ಲಿ ಕೇಂದ್ರ ಸರಕಾರ ಇಡೀ ದೇಶಕ್ಕೆ ಉಚಿತವಾಗಿ ಅಕ್ಕಿಯನ್ನು ಕೊಟ್ಟಿದೆ. 2020 ರಿಂದ ಕಳೆದ ಫೆಬ್ರವರಿ ತಿಂಗಳವರೆಗೆ ಕೇಂದ್ರ ಸರಕಾರ ಪ್ರತಿ ತಲೆಗೆ ನಾಲ್ಕು ಕೆಜಿ ಅಕ್ಕಿ ಕೊಟ್ಟಿದೆ. ಈ ರೀತಿ ಕೇಂದ್ರ ಅಕ್ಕಿ ಕೊಟ್ಟ ವಿಚಾರ ಉತ್ತರ ಪ್ರದೇಶದ ಎಲೆಕ್ಷನ್ ವೇಳೆ ದೊಡ್ಡ ಚರ್ಚೆಯಾಗಿತ್ತು. ಹೀಗಾಗಿಯೇ ಅಲ್ಲಿನ ಜನರು ಗುಡವಿಲ್ ತೋರಿಸಿದರು ಎಂದು ಅವರು ಹೇಳಿದರು.
ಮಾಜಿ ಸಿಎಂ, ಎಸ್. ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ಧರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದಾರೆ. ಎರಡು ಬಾರಿ ಉಪ ಮುಖ್ಯಮಂತ್ರಿ ಆಗಿದ್ದವರು. ಚಾಮುಂಡೇಶ್ವರಿ ವಿಧಾನ ಸಭೆ ಕ್ಷೇತ್ರದ ಒಂದು ಕಡೆ ಕಬಿನಿ ನದಿ ಇದೆ. ಮತ್ತೊಂದು ಕಡೆ ಕಾವೇರಿ ನದಿ ಇದೆ. ಇವರಿಗೆ ಕುಡಿಯಲು ನೀರು ಕೊಡಲು ಆಗಲಿಲ್ಲ. ಅದಕ್ಕಾಗಿಯೇ ಅಲ್ಲಿನ ಮತದಾರು ಅವರನ್ನು ಬದಾಮಿಗೆ ಕಳಿಸಿದರು. ಅಂದು ಒಬ್ಬ ಮುಖ್ಯಮಂತ್ರಿಯಾಗಿದ್ದವರನ್ನು ಮೈಸೂರಿನ ಜನರು 36 ಸಾವಿರ ಮತಗಳ ಅಂತರದಿಂದ ಅವರನ್ನು ತಿರಸ್ಕಾರ ಮಾಡಿದ್ದಾರೆ. ಇದನ್ನು ನೋಡಿದರೆ ಅವರಿಗೆ ಯಾವ ಗೌರವ ಸಿಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಸಂಸದರು ವಾಗ್ದಾಳಿ ನಡೆಸಿದರು.
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೋಟ್ ಹಾಕಿ ಎಂದು ಬರುವವರಿಗೆ ಚಪ್ಪಲಿಯಿಂದ ಹೊಡೆಯಿರಿ ಎಂದು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಮೋದ ಮುತಾಲಿಕ ಅವರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಅವರ ಬಾಯಿಂದ ಅಂತಹ ಮಾತು ಬಂದಿದೆ ಎಂಬುದು ನನಗೆ ನಂಬೋಕೆ ಆಗ್ತಿಲ್ಲ ಎಂದು ಅವರು ಹೇಳಿದರು.
ರಾಜ್ಯ ರಾಜಕಾರಣಕ್ಕೆ ಬರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದಲ್ಲಿ ಅವರ ಕೆಳಗಡೆ ಸೇವೆ ಮಾಡಲು ನನಗೆ ಬಹಳ ಖುಶಿ ಇದೆ. 2029ರ ವರೆಗೂ ನಾನು ಕೊಡಗು- ಮೈಸೂರು ಸಂಸದನಾಗಿ ಇರಲು ಬಯಸುತ್ತೇನೆ. ಅಷ್ಟರಲ್ಲಿ 15 ವರ್ಷಗಳಲ್ಲಿ ಆ ಕ್ಷೇತ್ರಕ್ಕೆ ಒಬ್ಬ ಸಂಸದನಾಗಿ ಏನೇನು ಕೆಲಸ ಮಾಡಬೇಕು ಅಷ್ಟೂ ಕೆಲಸವನ್ನು ಮಾಡತ್ತೇನೆ. ಆ ಬಳಿಕ ರಾಜಕಾರಣದಲ್ಲಿ ಇರಬೇಕೋ? ಬೇಡವೋ? ಎಂಬುದುರ ಬಗ್ಗೆ ಯೋಚಿಸುತ್ತೇನೆ. ಏಕೆಂದರೆ ನನಗೆ ಸಾಯುವವರೆಗೆ ಪಾಲಿಟಿಕ್ಸ್ ಮಾಡುವ ಆಸೆ ಇಲ್ಲ ಎಂದು ಸಂಸದ ಪ್ರತಾಪ ಸಿಂಹ ಸ್ಪಷ್ಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಬಿಜೆಪಿ ಮುಖಂಡ ದಯಾಸಾಗರ ಪಾಟೀಲ, ಸುರೇಶ ಬಿರಾದಾರ, ಶಿವರುದ್ರ ಬಾಗಲಕೋಟ ಮತ್ತು ವಿಜಯ ಜೋಶಿ ಉಪಸ್ಥಿತರಿದ್ದರು.