ಯುವಕರಿಗೆ ಸ್ವಯಂ ಉದ್ಯೋಗದ ಅವಶ್ಯಕತೆಯಿದೆ: ಓಂಕಾರ್ ಪಾಟೀಲ್

ಬೀದರ:ಜ.17:ಯುವಜನತೆಯು ಅನೇಕ ಪದವಿಗಳನ್ನು ಪಡೆದು ಬೇರೆ ಬೇರೆ ಶಿಕ್ಷಣ ಕೌಶಲ್ಯಗಳನ್ನು ಪಡೆದರೂ ಸಹ ಅವರಿಗೆಲ್ಲ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ಏಕೆಂದರೆ ಸರ್ಕಾರ ಎಲ್ಲರಿಗೂ ಉದ್ಯೋಗಗಳನ್ನು ಕೊಡಲು ಸಾಧ್ಯವಿಲ್ಲ. ಒಂದು ರೀತಿಯಿಂದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉದ್ಯೋಗ ಮಾಡುವ ಅಪೇಕ್ಷೆಯಿಂದಾಗಿ ಯುವಕರು ಮತ್ತು ಯುವತಿಯರು ಪರಾವಲಂಬಿಗಳಾಗಿರುತ್ತಿರುವುದು ನಿಜವಾಗಿಯೂ ಖೇದನಿಯ ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಓಂಕಾರ್ ಪಾಟೀಲ್ ಅವರು ವಿಷಾದ ವ್ಯಕ್ತಪಡಿಸಿದರು. ಅವರು ಇಂದು ಬಾವಗಿ ಗ್ರಾಮದಲ್ಲಿ ಧರ್ಮಸ್ಥಳ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಸ್ವ ಉದ್ಯೋಗ ಪ್ರೇರಣಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಯುವಜನರಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಸ್ವಉದ್ಯೋಗ ಮಾಡುವ ತರಬೇತಿಗಳನ್ನು ಪಡೆದು ಸ್ವಂತ ಉದ್ಯೋಗ ಮಾಡುವುದರಿಂದ ಜೀವನ ಸಾರ್ಥಕವಾಗುತ್ತದೆ ಮತ್ತು ತಾವು ಬಾಳುವುದಲ್ಲದೆ ಸಮಾಜದಲ್ಲಿ ಅನೇಕರಿಗೆ ಉದ್ಯೋಗಗಳನ್ನು ನೀಡಲು ಯುವಕರು ಸಮರ್ಥರಾಗುತ್ತಾರೆ. ಇಂದಿನ ದಿನಗಳಲ್ಲಿ ತರುಣರು ಜನಸಾಮಾನ್ಯರ ಬೇಕು ಬೇಡಗಳನ್ನು ತಿಳಿದುಕೊಂಡು ತಾವು ಸ್ವಯಂಉದ್ಯೋಗಗಳು ಮಾಡುವುದರಿಂದ ಆರ್ಥಿಕವಾಗಿ ಸದೃಢರಾಗಬಹುದು. ಕೃಷಿ, ಕಾರ್ಯಗಳಾದ ಡೈರಿ, ಕೋಳಿ ಸಾಕಾಣಿ, ಜೇನು ಸಾಕಾಣೆ, ತೋಟಗಾರಿಕೆ ರೇಷ್ಮೆ ಕೃಷಿ, ಹೂಗಾರಿಕೆ, ಮೀನುಗಾರಿಕೆ ಇತ್ಯಾದಿಗಳು ಸಹ ತರುಣರು ತರಬೇತಿಯನ್ನು ಪಡೆದು ಸ್ವಯಂಉದ್ಯೋಗ ಮಾಡಬಹುದಾಗಿದೆ. ಜೊತೆಗೆ ಮಹಿಳೆಯರು ಸಹ ಉತ್ಪನ್ನ ಕಾರ್ಯಕ್ರಮಗಳು ಮಾಡುವ ದೃಷ್ಟಿಯಿಂದ ಉಡುಗೆವಿನ್ಯಾಸ, ಬ್ಯೂಟಿ ಪಾರ್ಲರ್, ಧೂಪ ದ್ರವ್ಯದ ತುಂಡುಗಳ ತಯಾರಿಕೆ, ಸೀರೆಗಳ ಮೇಲೆ ಕಲಾತ್ಮಕತೆ ಬಿಡಿಸುವುದಾಗಲಿ,ಬ್ಯಾಗ್ ತಯಾರಿಕೆ, ಮಸಾಲೆ ಪುಡಿಗಳು ಮಾಡುವುದು, ರೊಟ್ಟೆಗಳನ್ನು ತಯಾರಿಸಿ ಮಾರುವುದು, ಪಾಕೆಟ್ಗಳನ್ನು ಸಿದ್ಧಪಡಿಸಿ ಮಾರಾಟಮಾಡುವುದು ಮಾಡಿದರೆ ಆರ್ಥಿಕವಾಗಿ ಅವರು ಬೆಳೆಯಬಹುದು ಎಂದು ಯುವ ಜನತೆಗೆ ಮಾಹಿತಿಯನ್ನು ನೀಡಿದರು. ಸಂಸ್ಥೆಯ ಒಕ್ಕೂಟದ ವಲಯ ಮೇಲ್ವಿಚಾರಕರಾದ ಸಂತೋಷ್ ಕುಮಾರ್ ಅವರು ಮಾತನಾಡಿ ಆರ್ಥಿಕವಾಗಿ ಉನ್ನತೀಕರಣವಾಗಲು
ದ್ವಿಚಕ್ರ ವಾಹನ ರಿಪೇರಿ, ರೇಡಿಯೋ/ಟಿವಿ ಹೀಗೆ ಎಲೆಕ್ಟ್ರಿಕಲ್ ಸಾಮಾನುಗಳು ಸಹ ರಿಪೇರಿ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು .ಸಮನ್ವಯ ಅಧಿಕಾರಿಗಳಾದ ಶ್ರೀಮತಿ ಮಮತಾ ಮಾತನಾಡಿದರು ಶಿಬಿರದಲ್ಲಿ ಸ್ಥಳೀಯ ಸೇವಾ ಪ್ರತಿನಿಧಿಗಳು ಹಾಗೂ ಸ್ವಸಹಾಯ ಸಂಘದ ಸದಸ್ಯರು ಯುವಕರು ಯುವತಿಯರು ಭಾಗವಹಿಸಿದರು.