ಯುವಕರಿಗೆ ಕುಡಿತದ ಚಟ ಹತ್ತಿಸಿದ್ದೇ ಬಿಜೆಪಿ ಸಾಧನೆ: ಆರ್.ರಾಜೇಂದ್ರ

ಸಿರಾ, ನ. ೧೯- ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲು ಅನುಭವಿಸಿರಬಹುದು. ಆದರೆ ಕಾರ್ಯಕರ್ತರು ಮತ್ತು ಮುಖಂಡರು ಧೃತಿಗೆಡುವ ಅಗತ್ಯ ಇಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ ಆರ್.ರಾಜೇಂದ್ರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಮತ ಎಣಿಕೆ ಮುನ್ನಾದಿನ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೂ, ವೈದ್ಯರ ಸಲಹೆ ಮೇರೆಗೆ ಇನ್ನೂ ಕೆಲವು ದಿನ ವಿಶ್ರಾಂತಿ, ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಅವರ ನಿರ್ದೇಶನದ ಮೇರೆಗೆ ನಾನು ಕಾರ್ಯಕರ್ತರನ್ನು ಸಂತೈಸಲು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಜಿಲ್ಲೆಯ ಮುಖಂಡರು ಕಾರ್ಯಕರ್ತರ ಸಭೆ ನಡೆಸಲಿದ್ದಾರೆ ಎಂದರು.
ಬಿಜೆಪಿ ಪಕ್ಷ ಉಪಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಿದ್ದು, ಆಶ್ವಾಸನೆಗಳ ಮೂಲಕ ಮತಗಳನ್ನು ಕೊಂಡುಕೊಳ್ಳುವ ಮೂಲಕ ಗೆಲುವು ಸಾಧಿಸಲಾಗಿದೆ. ಪ್ರತಿ ಹಳ್ಳಿಯಲ್ಲಿ ಕನಿಷ್ಟ ೩೦ರಿಂದ ೫೦ಯುವಕರು ಕುಡಿತದ ಚಟ ಕಲಿತಿದ್ದಾರೆ. ಇದುವೇ ಬಿಜೆಪಿಯ ಸಾಧನೆ. ಮುಂದಿನ ದಿನಗಳಲ್ಲಿ ಸಮಾಜದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಕುಟುಂಬಗಳಲ್ಲಿ, ಹಳ್ಳಿಗಳಲ್ಲಿ ಕಲಹ, ಕಳ್ಳತನ ಹೆಚ್ಚುವ ಸಾಧ್ಯತೆ ಇದೆ ಎಂದ ಅವರು, ಇನ್ನೊಂದು ತಿಂಗಳಲ್ಲಿ ಮುಖ್ಯಮಂತ್ರಿಗಳೇ ಬದಲಾಗುವ ಸಂಭವವಿದೆ. ಹಾಗಾದರೆ, ಚುನಾವಣೆಯಲ್ಲಿ ನೀಡಿರುವ ಆಶ್ವಾಸನೆಗಳನ್ನು ಹೇಗೆ ಪೂರೈಸುತ್ತಾರೆ, ಒಂದು ವೇಳೆ ಮುಖ್ಯಮಂತ್ರಿ ಬದಲಾದರೆ, ಮುಂದಿನ ಡಿಸೆಂಬರ್ ವೇಳೆಗೆ ಮತ್ತೊಂದು ಚುನಾವಣೆ ನಿರೀಕ್ಷಿಸಬಹುದು ಎಂದರು.
೨೦೧೮ಕ್ಕೂ ಮುನ್ನ ಜಯಚಂದ್ರ ಆರಂಭಿಸಿದ ಯೋಜನೆಗಳನ್ನು ಮುಂದುವರೆಸಬೇಕು ಬಿಟ್ಟರೆ, ಸರ್ಕಾರದಲ್ಲಿ ಹಣವಿಲ್ಲ. ಹೇಗೆ ಹೊಸ ಯೋಜನೆಗಳನ್ನು ತರಲು ಸಾಧ್ಯವಿದೆ. ಮೊನ್ನೆಯಷ್ಟೆ ಸಾಮಾಜಿಕ ಜಾಲತಾಣದಲ್ಲಿ ಕಂಡಂತೆ, ಬಾಲಕಿಯೊಬ್ಬಳು ತಮ್ಮ ತಂದೆಗೆ ಸಂಬಳ ಕೊಡುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾಳೆ. ನೌಕರರಿಗೆ ಸಂಬಳ ಕೊಡಲು ಸರ್ಕಾರದಲ್ಲಿ ಹಣವಿಲ್ಲ ಎಂದರೆ, ಚುನಾವಣೆಗೆ ಮಾತ್ರ ಹೇಗೆ ಹಣ ಬರುತ್ತದೆ ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಜಿ.ಎಸ್.ರವಿ, ಶಶಿಧರ್‌ಗೌಡ, ಗುಳಿಗೇನಹಳ್ಳಿ ಆರ್.ನಾಗರಾಜು, ರೂಪೇಶ್, ಹಲಗುಂಡೇಗೌಡ, ಅಜಯ್‌ಕುಮಾರ್, ಭೂವನಹಳ್ಳಿ ಸತ್ಯನಾರಾಯಣ್, ಷಣ್ಮುಖಪ್ಪ, ನರಸಿಂಹಯ್ಯ, ಶಿವಕುಮಾರ್, ಮನುಪಾಟೀಲ್, ವಿನಯ್ ತ್ಯಾಗರಾಜ್, ಹಂದಿಕುಂಟೆ ನಾರಾಯಣಪ್ಪ, ಎಚ್.ಎಲ್.ರಂಗನಾಥ್, ಕಲಾವಿದ ರಂಗನಾಥಪ್ಪ, ಧರಣಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.