ಯುವಕರಿಂದ ಹೆಚ್ಚಿನ ಸಂಗೀತ ಸಂಯೋಜನೆ ಮೂಡಿಬರಲಿ: ಪಟ್ಟಣಶೆಟ್ಟಿ

ಧಾರವಾಡ, ನ 2- ಯುವಕರು ಹೆಚ್ಚೆಚ್ಚು ಸಾಹಿತ್ಯ- ಸಂಗೀತದ ಕಾರ್ಯಗಳನ್ನು ಕೈಗೊಳ್ಳುವತ್ತ ಮುಂದಾಗಬೇಕು. ಇನ್ನೂ ಹೆಚ್ಚಿನ ಸಂಗೀತ ಸಂಯೋಜನೆ ಅಕ್ಷಯಕುಮಾರ ಜೋಶಿ ಅವರಿಂದ ಮೂಡಿ ಬರಲಿ’ ಎಂದು ಹಿರಿಯ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಧಾರವಾಡದ ಅವರ ಮನೆಯಲ್ಲಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ನಿಮಿತ್ತ ಎ.ಆರ್.ಜೆ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಹುಬ್ಬಳ್ಳಿಯ ಯುವಕ ಅಕ್ಷಯಕುಮಾರ ಜೋಶಿ ಅವರು ಬರೆದ ಸಾಹಿತ್ಯ ಸಂಯೋಜನೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕನ್ನಡ ಮತ್ತು ಕರ್ನಾಟಕದ ಏಳ್ಗೆಗಾಗಿ ನಾವೆಲ್ಲ ಉಳಿಸುವ, ಬೆಳೆಸುವ ಅಗತ್ಯವಿಲ್ಲ. ನಿತ್ಯ ನಮ್ಮಮನೆಯ ಭಾಷೆಯಾಗಿ ಬಳಸಿದರೆ ಸಾಕು. ಅಂತಹ ನಿಟ್ಟಿನಲ್ಲಿ ಅಕ್ಷಯಕುಮಾರ ಅವರ ಕಾರ್ಯ ಶ್ಲಾಘನೀಯ’ ಎಂದರು.
ಇಂಥ ಒಂದು ಸುಂದರ ಸಾಹಿತ್ಯ ಬರೆದು, ಅದನ್ನು ಅಷ್ಟೇ ಸುಂದರವಾಗಿ ಸಂಯೋಜನೆ ಮಾಡಿ ಕನ್ನಡ ಸಂಗೀತ, ಸಾಹಿತ್ಯ ರಸಿಕರಿಗೆ ಅರ್ಪಿಸಿದ ಕೆಲಸ ಸಣ್ಣದಲ್ಲ. ಕನ್ನಡವೆಂದರೆ ಮೂಗು ಮುರಿಯುವ ಜನರ ನಡುವೆ ಇದೊಂದು ಖುಷಿಯ ಕಾರ್ಯವಾಗಿದೆ’ ಎಂದರು.
ನಂತರ ಮಾತನಾಡಿದ ಲೇಖಕಿ ಹೇಮಾ ಪಟ್ಟಣಶೆಟ್ಟಿ ಅವರು, ‘ಯುವಕರು ಇಂಥ ಕ್ರೀಯಾಶೀಲ ಕಾರ್ಯಗಳತ್ತ ಮುನ್ನಡೆಯುವ ಮೂಲಕ ಕನ್ನಡಕ್ಕೆ ತಮ್ಮದೆಯಾದ ಕೊಡುಗೆ ನೀಡಬೇಕು. ಇವೆಲ್ಲ ಮುಂದೆ ದಾಖಲೆಗಳ ಮೂಲಕ ನಮ್ಮಲ್ಲಿ ಉಳಿಯುತ್ತವೆ. ಇದು ನಿಜಕ್ಕೂ ಅಭಿನಂದನಾರ್ಹ ಕಾರ್ಯವಾಗಿದೆ’ ಎಂದು ಪ್ರಶಂಸೆ ಮಾಡಿದರು.
ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ‘ಕನ್ನಡದ ಕುರಿತಾದ ಕಾರ್ಯಗಳಲ್ಲಿ ಇಂದು ಯುವಕರ ಪಾಲು ಹೆಚ್ಚಿದೆ. ಈ ಮೂಲಕ ಅಕ್ಷಯಕುಮಾರ ಅವರ ಸಾಹಿತ್ಯ ಪಯಣ ಉತ್ತಮ ರೀತಿಯಲ್ಲಿ ಸಾಗಲಿ’ ಎಂದು ಈ ಸಂದರ್ಭದಲ್ಲಿ ಹಾರೈಸಿದರು.
ಈ ಸಂದರ್ಭದಲ್ಲಿ ಗೀತೆಯನ್ನು ಬಿಡುಗಡೆ ಗೊಳಿಸಿದ ಪಟ್ಟಣಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಕವಿ ಡಾ.ವಿ.ಸಿ ಐರಸಂಗ, ಯುವ ಬರಹಗಾರ ಕಲ್ಮೇಶ ತೋಟದ, ಪ್ರಮೋದ ಕುಂದಗೋಳ ಉಪಸ್ಥಿತರಿದ್ದರು.