ಯುವಕರಲ್ಲಿ ಆತ್ಮಸ್ಥೈರ್ಯ ತುಂಬಲು ದೇಸಿ ಕ್ರೀಡೆ ಅವಶ್ಯ

ಮಧುಗಿರಿ, ಆ. ೨೯- ಗ್ರಾಮೀಣ ಭಾಗದ ದೇಸಿ ಕ್ರೀಡೆಯಿಂದ ಯುವಕರಲ್ಲಿ ಆತ್ಮಸ್ಥೈರ್ಯ ತುಂಬಲು ಸಹಕಾರಿಯಾಗಿದೆ ಎಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.
ತಾಲ್ಲೂಕಿನ ಕೊಡಿಗೇನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠ ಶಾಲಾ ಮೈದಾನದಲ್ಲಿ ಫ್ರೆಂಡ್ಸ್ ಗ್ರೂಪ್ ವತಿಯಿಂದ ಆಯೋಜಿಸಿದ್ದ ೧೦ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣಾ ಭಾಗದಲ್ಲಿ ಕಬ್ಬಡಿ, ವಾಲಿಬಾಲ್, ಖೋಖೋ ದೇಸಿ ಕ್ರೀಡೆಗಳಿಗೆ ಉತ್ತೇಜನ ನೀಡಿದಾಗ ಇಂದಿನ ಪೀಳಿಗೆಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಯುವ ಪ್ರತಿಭೆಗಳನ್ನು ಗುರುತಿಸಲು ಇಂತಹ ಪಂದ್ಯಾವಳಿಗಳು ಸಹಕಾರಿಯಾಗಲಿದ್ದು, ಕ್ರೀಡಾಪಟುಗಳಿಗೆ ಬೇಕಾದಂತಹ ಸಹಕಾರ ಮತ್ತು ಸವಲತ್ತು ನೀಡಲು ನಾನು ಸಿದ್ಧನಿದ್ದೇನೆ. ಕರ್ನಾಟಕದಲ್ಲಿ ಉತ್ತಮ ಸರ್ಕಾರ ಆಡಳಿತಕ್ಕೆ ಬಂದಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಸಚಿವ ಕೆ.ಎನ್ ರಾಜಣ್ಣನವರಿದ್ದು ಇವರಿಂದ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ. ಧೈರ್ಯದಿಂದ ಕ್ರೀಡೆಯಲ್ಲಿ ಭಾಗವಹಿಸಿ ನಮ್ಮ ಜಿಲ್ಲೆಯ ಹೆಸರು ಉಜ್ವಲಿಸುವಲ್ಲಿ ಸದೃಢರಾಗಬೇಕು ಎಂದರು.
ಈ ಪಂದ್ಯಾವಳಿ ತಾತ್ಕಾಲಿಕವಾಗದೆ ನಿರಂತರವಾಗಿ ಮುಂದುವರಿಯಬೇಕು. ಇಂತಹ ಕ್ರೀಡೆಗಳಿಂದ ಮಾತ್ರ ಯುವಕರಲ್ಲಿ ಆತ್ಮವಿಶ್ವಾಸ ವೃದ್ದಿಸುವುದರ ಜತೆಗೆ ಮೊಬೈಲ್ ಮತ್ತು ಟಿವಿ ವ್ಯಾಮೋಹದಿಂದ ಹೊರಬರಲು ಸಾಧ್ಯವಾಗಲಿದೆ. ಇದಕ್ಕೆ ನನ್ನಂದಾಗುವಂತಹ ಸಹಾಯದ ಜತೆಗೆ ಸಚಿವರುಗಳಾದ ಡಾ. ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ ರವರಿಂದಲೂ ಕೂಡಾ ಸಹಾಯ ಮಾಡಿಸುವ ಭರವಸೆ ನೀಡಿದರು.
ಎಎಸೈ ಮೆಹಬೂಬ್ ಖಾನ್ ಮಾತನಾಡಿ, ನಾನು ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರತಿನಿಧಿಸಿ ಸರ್ಕಾರಿ ಹುದ್ದೆ ಅಲಂಕರಿಸಿದ್ದೇನೆ. ವಾಲಿಬಾಲ್ ಎಂಬ ಕ್ರೀಡೆ ಅಡಿಯಿಂದ ಮುಡಿವರೆಗೆ ವ್ಯಾಯಾಮ ಮಾಡಿಸುವುದಲ್ಲದೆ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಇಂತಹ ಅತ್ಯುತ್ಯಮ ಕ್ರೀಡೆಯನ್ನು ಪರಸ್ಪರ ಪ್ರೀತಿ ಮತ್ತು ಶ್ರದ್ಧೆಯಿಂದ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಡಾ ಹಾಲಪ್ಪ, ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ಪಿ. ಕೃಷ್ಣಪ್ಪ, ಎಎಸೈಗಳಾದ ಖಾನ್, ಸೂರ್ಯನಾರಾಯಣ್, ಮುಖಂಡರಾದ ಮಕ್ತಿಯಾರ್, ರಾಜೇಶ್, ಜಬೀಉಲ್ಲಾ, ಎಸ್ ಇಮ್ರಾನ್ ಉಪಸ್ಥಿತರಿದ್ದರು.