
ಬೆಂಗಳೂರು,ಸೆ.೧೯- ಸಾಲಕ್ಕೆ ಪ್ರತಿಯಾಗಿ ಮೊಬೈಲ್ ಕಿತ್ತಿಟ್ಟುಕೊಂಡ ಯುವಕನನ್ನು ಅಪಹರಿಸಿ ಕತ್ತು ಕೊಯ್ದು ಭೀಕರವಾಗಿ ಕೊಲೆಗೈದಿದ್ದ ಆರೋಪಿಗಳು ಸಂಪಿಗೆಹಳ್ಳಿ ಠಾಣೆಗೆ ಶರಣಾಗಿದ್ದಾರೆ.
ಫಾರೂಕ್ ಖಾನ್ ಕೊಲೆಯಾದ ಯುವಕನಾಗಿದ್ದಾನೆ, ಕೃತ್ಯ ನಡೆಸಿದ ಸುಹೈಲ್ ಖಾನ್, ಮುಬಾರಕ್ ಹಾಗೂ ಅಲಿ ಅಕ್ರಂ ಶರಣಾಗಿದ್ದು ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ
ಕಳೆದ ಸೆ.೧೭ ಮಧ್ಯಾಹ್ನ ಸಂಪಿಗೆಹಳ್ಳಿಯ ಅರ್ಕಾವತಿ ಲೇಔಟ್‌ನಲ್ಲಿ ಫಾರೂಕ್ ಖಾನ್ ಎಂಬಾತನನ್ನು ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೈಯ್ಯಲಾಗಿತ್ತು. ಕೊಲೆಯಾದ ಫಾರೂಕ್ ಖಾನ್‌ನಿಂದ ಸುಹೈಲ್ ಖಾನ್ ೧೦ ಸಾವಿರ ರೂ. ಸಾಲ ಪಡೆದಿದ್ದು ಸಾಲ ವಾಪಸ್ ಕೊಡುವುದು ವಿಳಂಬವಾದಾಗ ಸುಹೈಲ್‌ನ ಮೊಬೈಲ್ ಫೋನ್‌ನನ್ನು ಫಾರೂಕ್ ಹಾಗೂ ಆತನ ಸ್ನೇಹಿತ ಸದ್ದಾಂ ಕಿತ್ತಿಟ್ಟುಕೊಂಡಿದ್ದರು.
ಅಲ್ಲದೇ ನೀನು ಹಣ ಕೊಡದಿದ್ದರೆ ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ಸುಹೈಲ್‌ಗೆ ಫಾರೂಕ್ ಎಚ್ಚರಿಕೆ ನೀಡಿದ್ದು ಮೊಬೈಲ್ ನಲ್ಲಿ ಸುಹೈಲ್ ತಾಯಿಯ ಫೋಟೋ ಇತ್ತು. ಆದ್ದರಿಂದ ಮೊಬೈಲ್ ಹಿಂದಿರುಗಿಸುವಂತೆ ಸುಹೈಲ್ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದ, ಆದರೆ ಮೊಬೈಲ್ ಕೊಡದೇ ಫಾರೂಕ್ ಆಟವಾಡಿಸುತ್ತಿದ್ದ. ಹೀಗಾಗಿ ಸೆ.೧೭ರಂದು ಎಚ್ಚರಿಕೆ ಕೊಡುವ ಸಲುವಾಗಿ ಫಾರೂಕ್‌ನನ್ನು ಸುಹೈಲ್ ಖಾನ್ ಹಾಗೂ ಇತರೆ ಆರೋಪಿಗಳು ಆಟೋದಲ್ಲಿ ಅರ್ಕಾವತಿ ಲೇಔಟ್‌ಗೆ ಅಪಹರಿಸಿ ಕರೆದೊಯ್ದಿದ್ದರು.
ಆರೋಪಿಗಳು ಹೆದರಿಸಲೆಂದು ಫಾರೂಕ್‌ನ ಕೈಗೆ ಚಾಕುವಿನಿಂದ ಇರಿದಿದ್ದರು. ಬಳಿಕ ಫಾರೂಕ್ ಪ್ರತಿರೋಧಿಸಿದಾಗ ಕೈ ತಪ್ಪಿ ಚಾಕು ಆತನ ಕುತ್ತಿಗೆ ಸೀಳಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಫಾರೂಕ್ ನರಳಾಡುತ್ತಿದ್ದ. ಆದರೆ ಆತ ಬದುಕಿದರೆ ತಮ್ಮ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗುತ್ತದೆ ಎಂದು ತಿಳಿದ ಆರೋಪಿಗಳು ಆತನನ್ನ ಹತ್ಯೆಗೈದಿದ್ದರು.
ಸುಹೈಲ್ ಮತ್ತಿತರರೊಂದಿಗೆ ತೆರಳಿದ್ದ ತನ್ನ ಸಹೋದರ ಫಾರೂಕ್ ಕಾಣೆಯಾಗಿದ್ದಾನೆ ಎಂದು ಆತನ ಸಹೋದರ ಶಬ್ಬೀರ್ ಅಹಮದ್ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ದೂರಿನ ಬೆನ್ನಲ್ಲೇ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಆರೋಪಿಗಳನ್ನ ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಂಪಿಗೆಹಳ್ಳಿ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ