ಯುವಕನ ಹತ್ಯೆ: ಬಿಗಿ ಬಂದೋಬಸ್ತ್‌

ಮಂಗಳೂರು, ಜು.೨೯- ಇಲ್ಲಿನ ಹೊರವಲಯದ ಸುರತ್ಕಲ್‌ನ ಹೃದಯ ಭಾಗದಲ್ಲಿ ಗುರುವಾರ ರಾತ್ರಿ ಮುಹಮ್ಮದ್‌ ಫಾಝಿಲ್‌ ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸುರತ್ಕಲ್‌ ಪರಿಸರದಲ್ಲಿ ಬಿಗಿಬಂದೋಬಸ್ತ್‌ ಏರ್ಪಡಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಸುರತ್ಕಲ್, ಬಜ್ಪೆ, ಮುಲ್ಕಿ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ರಜೆ ಘೋಷಿಸಿದ್ದಾರೆ.


ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ೧೦ರಿಂದ ರಾತ್ರಿ ೧೧ರವರೆಗೆ ಮದ್ಯ ಮಾರಾಟ ನಿಷೇಧಿಸಲು ಪೊಲೀಸ್ ಕಮಿಷನರ್ ಸೂಚನೆ ನೀಡಿದ್ದಾರೆ. ಶುಕ್ರವಾರ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದ ಫಾಝಿಲ್‌ ನಿನ್ನೆ ರಾತ್ರಿ ವೇಳೆ ಚಪ್ಪಲಿ ಹಾಗೂ ಸ್ಮಾರ್ಟ್‌ ವಾಚ್‌ ಖರೀದಿಗೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ಕಾರ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಜವಳಿ ಮಳಿಗೆಯ ಮುಂಭಾಗ ನಿಂತಿದ್ದ ಫಾಝಿಲ್‌ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ದಾಳಿ ನಡೆಸಿದೆ. ಆಸ್ಪತ್ರೆಗೆ ದಾಖಲಿಸಿದರೂ ಗಂಭೀರ ಗಾಯಗೊಂಡಿದ್ದ ಫಾಝಿಲ್‌ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಅಂಗಡಿಯ ಎದುರಿನ ಜಗಲಿಯಲ್ಲೇ ಮಾರಕಾಯುಧಗಳಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗದೆ ಸ್ಥಳದಲ್ಲೇ ಗಂಭೀರ ಸ್ಥಿತಿಯಲ್ಲಿ ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ, ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.  

ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ
ಕಳೆದ ರಾತ್ರಿ ಸುರತ್ಕಲ್ ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಮುಹಮ್ಮದ್ ಫಾಝಿಲ್(23) ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಇಂದು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇದೀಗ ಮೃತದೇಹವು ಆ್ಯಂಬುಲೆನ್ಸ್ ಮೂಲಕ ಇಲ್ಲಿನ ಮಂಗಳಪೇಟೆಯಲ್ಲಿರುವ ಫಾಝಿಲ್ ಮನೆರ ಮನೆ ತಲುಪಿದೆ. ಬಳಿಕ ಅಲ್ಲಿಂದ ಮೃತದೇಹವನ್ನು ಕಾಲ್ನಡಿಗೆಯಲ್ಲಿ ಮಂಗಳಪೇಟೆ ಮುಹಿಯುದ್ದೀನ್ ಮಸೀದಿಗೆ ಕೊಂಡೊಯ್ಯಲಾಯಿತು. ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಸೀದಿ ವಠಾರದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.  

ಶಾಂತಿ ಕಾಪಾಡುವಂತೆ ಕಮಿಷನರ್‌ ಮನವಿ
ಮಂಗಳೂರು, ಜು.೨೯- ನಗರ ಹೊರ ವಲಯದಲ್ಲಿ ನಡೆದ ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ತನಕ ನಿಖರ ಕಾರಣ ಗೊತ್ತಾಗಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಕೊಲೆಯಾದ ಸುರತ್ಕಲ್ ಪ್ರದೇಶಕ್ಕೆ ಭೇಟಿ ನೀಡಿದ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಪ್ರೇಮಪ್ರಕರಣಕ್ಕೆ ಸಂಬಂಧಿಸಿ ಕೊಲೆ ನಡೆಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕಮಿಷನರ್ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿಯ ತನಕ ಅಂತಹ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಸುಕಾಸುಮ್ಮನೆ ವಿಚಾರಗಳನ್ನು ಹಂಚಿಕೊಳ್ಳದೆ, ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಶಾಂತಿಕದಡುವ ಘಟನೆಗಳಿಗೆ ಆಸ್ಪದ ನೀಡದೆ ಶಾಂತಿಯಿಂದಿರಲು ಮನವಿ ಮಾಡಲಾಗಿದೆ. ಅಲ್ಲದೆ, ಬಿಗುಬಂದೋಬಸ್ತ್ ಎರ್‍ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.