ಯುವಕನ ಮೇಲೆ ಪೋಲಿಸ್ ದೌರ್ಜನ್ಯ: ಚೌಕ್ ಠಾಣೆಯ ಸಿಪಿಐ ನಾಯಕ್ ವಜಾಕ್ಕೆ ಹರವಾಳ್ ಆಗ್ರಹ

ಕಲಬುರಗಿ,ನ.23:ಅಫಜಲಪುರದ ಯುವಕ ದುಂಡಪ್ಪ ಎಸ್. ಜಮಾದಾರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಚೌಕ್ ಪೋಲಿಸ್ ಠಾಣೆಯ ಸಿಪಿಐ ಎಸ್.ಆರ್. ನಾಯಕ್ ಹಾಗೂ ಇತರೆ ಆರು ಜನ ಸಿಬ್ಬಂದಿಗಳನ್ನು ಕೂಡಲೇ ವಜಾಗೊಳಿಸಬೇಕು ಎಂಧು ಕರ್ನಾಟಕ ರಾಜ್ಯ ಟೋಕರೆ ಕೋಲಿ ಕಬ್ಬಲಿಗ ಸಂಘದ ರಾಜ್ಯಾಧ್ಯಕ್ಷ ಬಸವರಾಜ್ ಹರವಾಳ್ ಅವರು ಒತ್ತಾಯಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ತನಿಖೆಯು ನಿಷ್ಪಕ್ಷಪಾತವಾಗಿ ಹಾಗೂ ಪ್ರಾಮಾಣಿಕತೆಯಿಂದ ನಡೆಯುತ್ತಿಲ್ಲ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಕುರಿತು ಯಾರೋ ಸುಳ್ಳು ಮಾಹಿತಿ ನೀಡಿದ್ದರಿಂದ ಕಳೆದ ಅಕ್ಟೋಬರ್ 24ರಂದು ದುಂಡಪ್ಪ ಜಮಾದಾರ್ ಅವರನ್ನು ಚೌಕ್ ಪೋಲಿಸ್ ಠಾಣೆಯ ಸಿಪಿಐ ಎಸ್.ಆರ್. ನಾಯಕ್ ಹಾಗೂ ಆರು ಜನ ಪೋಲಿಸರು ಸೇರಿ ಅಪಹರಿಸಿಕೊಂಡು ಕೊಲೆ ಯತ್ನ, ಜಾತಿನಿಂದನೆ ಮಾಡಿ, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಆದಾಗ್ಯೂ, ತಪ್ಪಿತಸ್ಥ ಪೋಲಿಸರ ವಿರುದ್ಧ ಗಂಭೀರ ಪ್ರಕರಣಗಳನ್ನು ದಾಖಲಿಸದೇ ಸಂರಕ್ಷಿಸುವ ಕೆಲಸ ಆಗುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ಪೋಲಿಸರು ಠಾಣೆಯಲ್ಲಿ ದುಂಡಪ್ಪ ಜಮಾದಾರ್ ಅವರಿಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಇದರಿಂದಾಗಿ ಮೂರ್ನಾಲ್ಕು ಬಾರಿ ಮೂತ್ರದಲ್ಲಿ ರಕ್ತ ವಿಸರ್ಜನೆಯಾಗಿದೆ. ಅಸ್ವಸ್ಥನಾದ ದುಂಡಪ್ಪನ ಕಾಲುಗಳಿಗೆ ಮತ್ತು ತೊಡೆಗಳಿಗೆ, ಕುಂಡಿಯ ಹಿಂಭಾಗಕ್ಕೆ ಮಂಜುಗಡ್ಡೆ (ಐಸ್) ಹಚ್ಚಿ ಪೋಲಿಸರೇ ತಿಕ್ಕಿದ್ದಾರೆ. ಚಳಿಯಾಗುತ್ತಿದೆ ಬಿಡಿ ಎಂದು ಪದೇ ಪದೇ ಬೇಡಿಕೊಂಡರೂ ಸಹ ಬಿಡದೇ ಶಸ್ತ್ರಾಸ್ತ್ರ ಇದೆ ಎಂದು ಒಪ್ಪಿಕೊಂಡಾಗ ಬಿಡುತ್ತೇವೆ ಎಂದು ಪೋಲಿಸರು ಹೆದರಿಸಿದರು ಎಂದು ಅವರು ದೂರಿದರು.
ದುಂಡಪ್ಪನ ಹತ್ತಿರ ಸಿಪಿಐ ಎಸ್.ಆರ್. ನಾಯಕ್ ಅವರು ಬಂದು ನಮಗೆ ಸುಳ್ಳು ಮಾಹಿತಿ ನೀಡಿದ್ದರಿಂದ ನಾವು ಅನ್ಯಾಯವಾಗಿ ನಿನಗೆ ತಂದು ಹೊಡೆದಿದ್ದೇವೆ. ತಪ್ಪಾಗಿ ಹೋಗಿದೆ. ನೀನು ಯಾರಾದರೂ ನಿಮ್ಮ ಮನೆಯವರನ್ನು ಕರೆಯಿಸಿ ಒಂದು ಸಹಿ ಮಾಡಿಸಿ ಹೋಗು ಎಂದು ಕಸಿದುಕೊಂಡಿದ್ದ ಆತನ ಮೊಬೈಲ್ ಕೊಟ್ಟು ಆತನಿಂದ ಕರೆ ಮಾಡಿಸಿದರು. ಅದರಂತೆ ಬೇಗ ಎಪಿಎಂಸಿಯಲ್ಲಿರುವ ಉಕಡ್ ಚೌಕ್ ಪೋಲಿಸ್ ಓಪಿ ಹತ್ತಿರ ಬರಲು ಹೇಳಿದ. ಅದರಂತೆ ದುಂಡಪ್ಪನ ಸಹೋದರ ಲಚ್ಚಪ್ಪ ಜಮಾದಾರ್ ಅವರು ಅಲ್ಲಿಗೆ ಹೋಗಿದ್ದರಿಂದ ಬಿಳಿ ಹಾಳೆಯ ಮೇಲೆ ಸಹಿ ಮಾಡಿಸಿಕೊಂಡು ಬಿಟ್ಟು ಕಳಿಸಿದ್ದಾರೆ. ಈ ಎಲ್ಲ ಘಟನೆಗಳು ಪೋಲಿಸರ ದೌರ್ಜನ್ಯಕ್ಕೆ ಸಾಕ್ಷಿಯಾಗಿವೆ ಎಂದು ಅವರು ಹೇಳಿದರು.
ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ. ಇನ್ನೂ ಗಾಯಾಳು ಚೇತರಿಸಿಕೊಂಡಿಲ್ಲ. ಆದ್ದರಿಂದ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಹಾಗೂ ತಪ್ಪಿತಸ್ಥ ಪೋಲಿಸರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರೇವಣಸಿದ್ದಪ್ಪ ಹಲಚೇರಿಕರ್, ತಿಪ್ಪಣ್ಣಾ ಹುಲ್ಲೂರ್, ಆನಂದ್ ಸಂತೇಳ್ ಮುಂತಾದವರು ಉಪಸ್ಥಿತರಿದ್ದರು.