ಯುವಕನ ಕೊಲೆ : ಮೂವರ ಸೆರೆ

ಕಲಬುರಗಿ,ಜೂ.8-ಇಲ್ಲಿನ ಕರುಣೇಶ್ವರ ನಗರದ ನಿಖೀಲ್ ತಂದೆ ರಾಜು ಕೆಂಗಾರೆ (25) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಂದಿರಾ ನಗರದ ಸಂಜೀವಕುಮಾರ ತಂದೆ ತಿಪ್ಪಣ್ಣ ದೊಡ್ಡಮನಿ, ಶಿವಕುಮಾರ ತಂದೆ ತಿಪ್ಪಣ್ಣ ದೊಡ್ಡಮನಿ ಮತ್ತು ವಿಜಯಕುಮಾರ ತಂದೆ ತಿಪ್ಪಣ್ಣ ದೊಡ್ಡಮನಿ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಬ್ಬ ಆರೋಪಿ ಉದಯಕುಮಾರ ತಂದೆ ತಿಪ್ಪಣ್ಣ ದೊಡ್ಡಮನಿ ಈತನಿಗೆ ಘಟನೆಯಲ್ಲಿ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾ. ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
@12bc = ಘಟನೆ ವಿವರ
ಕರುಣೇಶ್ವರ ನಗರದ ವಿಕಾಸ ತಂದೆ ರಾಜು ಕೆಂಗಾರೆ ಅವರ ಸಹೋದರಿಯನ್ನು ಮುಂಬೈ ನಗರದಲ್ಲಿರುವ ಅವರ ಸೋದರತ್ತೆಯ ಮಗ ಪ್ರದೀಪ ಐಗೊಳೆ ಜೊತೆ ಮದುವೆ ನಿಶ್ಚಿತಾರ್ಥ ಮಾಡಲಾಗಿತ್ತು. ಪ್ರದೀಪ ಐಗೊಳೆಗೆ ಇಂದಿರಾ ನಗರದ ಉದಯಕುಮಾರ ದೊಡ್ಡಮನಿ ಎಂಬ ಯುವಕ ಫೋನ್ ಮಾಡಿ ” ನೀನು ಮದುವೆಯಾಗಲಿರುವ ಯುವತಿಯನ್ನು ತಾನು ಪ್ರೀತಿಸುತ್ತಿದ್ದು, ಆಕೆಯನ್ನು ನೀನು ಮದುವೆಯಾದರೆ ನಿನ್ನನ್ನು ಕೊಲೆ ಮಾಡುವೆ” ಎಂದು ಬೆದರಿಕೆ ಹಾಕಿದ್ದನು. ಈ ವಿಷಯದ ಬಗ್ಗೆ ಕೇಳಲು ಉದಯಕುಮಾರ ಹತ್ತಿರ ವಿಕಾಸ ಕೆಂಗಾರೆ ಮತ್ತು ಆತನ ತಾಯಿ ಕಮಲಾಬಾಯಿ, ಅಣ್ಣ ನಿಖೀಲ್ ಮತ್ತು ಸಂಬಂಧಿಕ ಹಣಮಂತ ಅವರು ಜೂ.5 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ವಾಜಪೇಯಿ ಬಡಾವಣೆಗೆ ಹೋಗಿದ್ದರು. ಈ ವೇಳೆ ಅಲ್ಲಿ ಮಾತಿಗೆ ಮಾತು ಬೆಳೆದಿದ್ದರಿಂದ ಉದಯಕುಮಾರ ತನ್ನ ಅಣ್ಣ ತಮ್ಮಂದಿರು ಹಾಗೂ ಇತರರನ್ನು ಫೋನ್ ಮಾಡಿ ಸ್ಥಳಕ್ಕೆ ಕರೆಯಿಸಿದ್ದನು. ಈ ವೇಳೆ ಜಗಳ ನಡೆದು ನಿಖೀಲ್ ಕೆಂಗಾರೆಯನ್ನು ರಾಡು ಮತ್ತು ಬಡಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಅಲ್ಲದೆ ಬಿಡಿಸಲು ಬಂದ ವಿಕಾಸ ಕೆಂಗಾರೆ ಅವರ ತಾಯಿ ಮತ್ತು ತಮ್ಮನ ಮೇಲೂ ಹಲ್ಲೆ ಮಾಡಲಾಗಿತ್ತು. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ದೂರಿನ ಅನ್ವಯ ಪೊಲಾಸರು ತನಿಖೆ ನಡೆಸಿ ಸಂಜೀವಕುಮಾರ ದೊಡ್ಡಮನಿ, ಶಿವಕುಮಾರ ದೊಡ್ಡಮನಿ ಮತ್ತು ವಿಜಯಕುಮಾರ ದೊಡ್ಡಮನಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ಘಟನೆಯಲ್ಲಿ ಉದಯಕುಮಾರ ದೊಡ್ಡಮನಿಗೆ ಗಾಯಗಳಾಗಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ನಡೆದಿದೆ.