ಯುವಕನ ಕೊಲೆ: ಇಬ್ಬರು ಆರೋಪಿಗಳ ಸೆರೆ ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಕೊಲೆ

ಕಲಬುರಗಿ,ಫೆ.12-ಇದೇ ತಿಂಗಳ 6 ರಂದು ನಡೆದ ಸೈಯದ್ ಚಿಂಚೋಳಿ ರಸ್ತೆಯ ಆಶ್ರಯ ಕಾಲೋನಿಯ ಶಿವಾಜಿ ಚೌಕ್ ನಿವಾಸಿ ರೋಹನ್ ತಂದೆ ದಶರಥ ವಾಕೋಡೆ (22) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಚೌಕ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಶ್ರಯ ಕಾಲೋನಿಯ ಆಟೋನಗರದ ಸುನೀಲ ಸಿಂಗ್ ಅಲಿಯಾಸ್ ಸುನೀಲ ತಂದೆ ಜಗ್ಗುಸಿಂಗ್ ಸಿಕ್ಕಲಗಾರ (19) ಮತ್ತು ಸೋಹೇಲ್ ತಂದೆ ಮಹ್ಮದ್ ಹನೀಫ್ (19) ಎಂಬುವವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಚಾಕು ಮತ್ತು ಇತರ ವಸ್ತುಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳಾದ ಸುನೀಲಸಿಂಗ್ ಮತ್ತು ಸೋಹೇಲ್ ಅವರು ರೋಹನ್ ವಾಕೋಡೆ ಬಳಿ ಕೈಗಡ ರೂಪದಲ್ಲಿ ಹಣ ಪಡೆದಿದ್ದರು. ರೋಹನ್ ಹಣ ವಾಪಸ್ ಕೇಳಿದಕ್ಕೆ ಆತನನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆ.6 ರಂದು ರೋಹನ್ ವಾಕೋಡೆಯನ್ನು ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ರೋಹನ್ ಸಹೋದರ ಧನರಾಜ ದಶರಥ ವಾಕೋಡೆ ಅವರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಕೊಲೆ ಪ್ರಕರಣದ ಪತ್ತೆಗೆ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್ ಅವರ ಮಾರ್ಗದರ್ಶನದಲ್ಲಿ ಚೌಕ್ ಪೊಲೀಸ್ ಠಾಣೆ ಪಿಐ ರಾಘವೇಂದ್ರ ಅವರ ನೇತೃತ್ವದಲ್ಲಿ ಪಿಎಸ್‍ಐ ದೇವಿಂದ್ರಪ್ಪ, ಎಎಸ್‍ಐ ಶಿವಶರಣಪ್ಪ ಬೋಚರೆ, ಸಿಬ್ಬಂದಿಗಳಾದ ಶಿವಾನಂದ, ಸುರೇಶ ಎಸ್.ಎನ್., ರಾಜಕುಮಾರ, ನಾಗೇಂದ್ರ, ಸೈಯದ್ ತೌಸೀಫ್ ಹುಸೇನ್, ದಯಾನಂದ, ಮೋಸಿನ್, ಫಿರೋಜ್, ಅಭಿಷೇಕ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡ ತನಿಖೆ ನಡೆಸಿ ನಗರದ ಆಳಂದ ಚೆಕ್ ಪೋಸ್ಟ್ ಹತ್ತಿರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಅವರು ಶ್ಲಾಘಿಸಿದ್ದಾರೆ.