
ಕಲಬುರಗಿ,ಮೇ.24-ಇಲ್ಲಿನ ರಿಂಗ್ ರಸ್ತೆಯ ಆದರ್ಶ ನಗರ ಕ್ರಾಸ್ ಹತ್ತಿರ ಇತ್ತೀಚೆಗೆ ನಡೆದ ಪೂಜಾ ಕಾಲೋನಿಯ ಪ್ರಮೋದ ಇಂದ್ರಜೀತ ಹೋಳಿ (24) ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ತಿಳಿಸಿದರು.
ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಪುರದ ನಾಟಿಕರ ಗಲ್ಲಿಯ ಸ್ವರಾಜ್ ಅಲಿಯಾಸ್ ಸಾಹಿಲ್ ತಂದೆ ನಾಗರಾಜ ಹೊಡಲ್ (19), ನಾಗರಾಜ ತಂದೆ ದೇವಪ್ಪ ಹೊಡಲ್ (48) ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಮಹಿಂದ್ರಾ ಥಾರ್ ಜೀಪ್ ಮತ್ತು ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ತಿಂಗಳ 22 ರಂದು ರಾತ್ರಿ ಪ್ರಮೋದ್ ಬೈಕ್ ಮೇಲೆ ರಿಂಗ್ ರಸ್ತೆಯ ಆದರ್ಶ ನಗರ ಕ್ರಾಸ್ ಹತ್ತಿರ ಹೋಗುತ್ತಿದ್ದಾಗ ರಸ್ತೆಗೆ ಅಡ್ಡಲಾಗಿ ನಿಂತಿದ್ದ ಜೀಪ್ ಚಾಲಕನಿಗೆ ಮುಂದೆ ಹೋಗಲು ಸೈಡ್ ಕೇಳಿದ್ದಾನೆ. ಈ ವೇಳೆ ಜೀಪಿನಲ್ಲಿದ್ದ ದುಷ್ಕರ್ಮಿಗಳು ಆತನ ಜೊತೆ ಜಗಳ ತೆಗೆದು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು.
ಈ ಸಂಬಂಧ ಅವಿನಾಶ ಹೋಳಿ ಎಂಬುವವರು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಆರೋಪಿಗಳ ಪತ್ತೆಗಾಗಿ ಉಪ ಪೊಲೀಸ್ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಐ.ಎ.ಚಂದ್ರಪ್ಪ, ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸಂತೋಷ ಬನಹಟ್ಟಿ ಅವರ ಮಾರ್ಗದರ್ಶನದಲ್ಲಿ ಎಂ.ಬಿ.ನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ವಿಶ್ವನಾಥ ಡಿ.ಕಬ್ಬೂರಿ, ಸಿಬ್ಬಂದಿಗಳಾದ ಹಣಮಂತ ತೋಟದ, ಗುರುರಾಜ, ಮಹೇಶ, ದಸ್ತಯ್ಯಾ, ಸಂತೋಷ, ಕಾಶಿರಾಮ, ಮುಕೇಶ ಕುಮಾರ, ಚನ್ನಬಸಯ್ಯ, ನಾಗರಾಜ, ಸಂತೋಷ ಜಿ.ಎಸ್., ಸೂರ್ಯಕಾಂತ, ಸೋಮನಾಥ, ಸಿದ್ದಣ್ಣ, ಸಂಜಯಕುಮಾರ, ಬಸವರಾಜ, ಅಯ್ಯುಬ್, ಪ್ರವೀಣ್, ಶೋಭಾ, ನಿರ್ಮಲಾ, ಶೀತಲ್, ಮಲ್ಲಮ್ಮ, ಚನ್ನವೀರೇಶ ಮತ್ತು ವಿಜಯ್ ಅವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.
ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ 10 ಸಾವಿರ ರೂ.ನಗದು ಬಹುಮಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪ ಪೊಲೀಸ್ ಆಯುಕ್ತ ಐ.ಎ.ಚಂದ್ರಪ್ಪ ಮತ್ತು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸಂತೋಷ ಬನಹಟ್ಟಿ ಉಪಸ್ಥಿತರಿದ್ದರು.