ಯುವಕನ ಅಪಹರಿಸಿ ೨ ಕೋಟಿಗೆ ಬೇಡಿಕೆ


ಬೆಂಗಳೂರು,ಮಾ.೨೬- ಶಿಕ್ಷಣ ಸಂಸ್ಥೆಯೊಂದರ ಮಾಲೀಕರ ಪುತ್ರನನ್ನು ಅಪಹರಿಸಿ ೨ ಕೋಟಿ ರೂ.ಗಳ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಕೃತ್ಯವನ್ನು ಕೇವಲ ೭ ಗಂಟೆಗಳಲ್ಲಿ ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೂರ್ವ ವಿಭಾಗದ ಪೊಲೀಸರು ನಾಲ್ವರನ್ನು ಬಂಧಿಸಿ ಯುವಕನನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಡಗೊಂಡನಹಳ್ಳಿಯ ಅಬ್ದುಲ್ ಪಹಾದ್, ಜಬೀವುಲ್ಲಾ, ಕೋರೆವೆಲ್ ಸಲ್ಮಾನ್, ತೌಫಿಕ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಆರೋಪಿಗಳು ಗೌತಮ್, ಕಿರಣ್ ಹಾಗೂ ತೌಫಿಕ್ ಪಾಷ ಜತೆ ಸೇರಿ ಕೃತ್ಯವೆಸಗಿದ್ದು, ಆರೋಪಿಗಳಲ್ಲಿ ಓರ್ವನ ತಂಗಿಯ ಮದುವೆ ಸಾಲ ತೀರಿಸುವುದಾಗಿ ಒಂದು ವಾರದಿಂದ ಸಂಚು ರೂಪಿಸಿ ಕೃತ್ಯ ನಡೆಸಿದ್ದಾರೆ ಎಂದರು.
ಪ್ರಕರಣದ ಸೂತ್ರಧಾರ ಅಬ್ದುಲ್ ಪಹಾದ್ ೨೦೧೮ರ ಸಾಲಿನಲ್ಲಿ ಕುಮಾರಿ ಜನೀಫರ್ ಎಂಬಾಕೆಯನ್ನು ಅಪಹರಿಸಿದ ಕೃತ್ಯ ದಾಖಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಮಾ. ೨೫ ರಂದು ಮಧ್ಯಾಹ್ನ ಶಿಕ್ಷಣ ಸಂಸ್ಥೆಯೊಂದರ ಮಾಲೀಕರ ಪುತ್ರ ರಫೀದ್ ಹರಾಫತ್ (೨೨) ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಹೋಗಿದ್ದು, ನಂತರ ಅವರ ತಂದೆಗೆ ಪರಿಚಯಸ್ಥರು ಮೊಬೈಲ್ ಕರೆ ಮಾಡಿ ನಿಮ್ಮ ಮಗನನ್ನು ನಾಲ್ವರು ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋದರು ಎಂದು ತಿಳಿಸಿದ್ದಾರೆ. ಕೂಡಲೇ ಪುತ್ರನ ಮೊಬೈಲ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸ್ನೇಹಿತರು, ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದರೂ ಎಲ್ಲಿಯೂ ಆತನ ಸುಳಿವಿರಲಿಲ್ಲ.
೨ ಕೋಟಿಗೆ ಬೇಡಿಕೆ
ಅಪಹರಿಸಿದ ೨ ಗಂಟೆಗಳ ನಂತರ ಅಪರಿಚಿತ ವ್ಯಕ್ತಿಗಳು ಹರಾಫತ್ ತಂದೆಗೆ ಕರೆ ಮಾಡಿ ನಿಮ್ಮ ಮಗನನ್ನು ಅಪಹರಿಸಲಾಗಿದ್ದು, ೨ ಕೋಟಿ ರೂ.ನೀಡಿದರೆ ಬಿಡುಗಡೆ ಮಾಡುತ್ತೇವೆ. ಇಲ್ಲದಿದ್ದರೆ ಆತನ ಕೈ-ಕಾಲು ಕತ್ತರಿಸುವುದಾಗಿ ಬೆದರಿಸಿ ನೀವು ಎಲ್ಲಿಗೆ ಹೋಗುವಿರಾ ಎಂಬುದನ್ನು ನಿಗಾ ವಹಿಸಲಿದ್ದು, ಪೊಲೀಸರಿಗೆ ವಿಷಯ ತಿಳಿಸಿದರೆ ಮಗನ ಕೈ-ಕಾಲು ಕತ್ತರಿಸುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ.
ಹರಾಫತ್ ಅಪಹರಣದ ವೇಳೆ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಕೃತ್ಯವನ್ನು ತಡೆಯಲು ಹೋದಾಗ ಅವರನ್ನು ನೆಲಕ್ಕೆ ತಳ್ಳಿ ಹುಡುಗಿಯನ್ನು ಚುಡಾಯಿಸುತ್ತಿದ್ದ ಕಾರಣಕ್ಕೆ ಅಪಹರಿಸಿ ಪಾಠ ಕಲಿಸುತ್ತೇವೆ ಎಂದು ಹೇಳೀ ಅಪಹರಿಸಿದ್ದರು.
ವಿಶೇಷ ತಂಡ ರಚನೆ’
ಅಪಹರಣದ ಸಂಬಂಧ ಕಾಡಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಗಂಭೀರವಾಗಿ ಪರಗಣಿಸಿದ ಡಿಸಿಪಿ ಡಾ. ಶರಣಪ್ಪ ಅವರು ಎಸಿಪಿ ಸಕ್ರಿ ಅವರ ನೇತೃತ್ವದಲ್ಲಿ ೫ ವಿಶೇಷ ತಂಡಗಳನ್ನು ರಚಿಸಿದ್ದರು. ವಿಶೇಷ ತಂಡಗಳು ಅಪಹರಣವಾದ ಯುವಕನ ಮತ್ತು ಆರೋಪಿಗಳ ಪೂರ್ವಾಪರ ಮಾಹಿತಿ ಸಂಗ್ರಹಿಸಿ ತಂತ್ರಜ್ಞಾನ ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹಣ ಗಳಿಸಲು ಸಂಚು
ಆರೋಪಿಗಳು ಹೆಚ್ಚಿನ ಸಾಲ ಮಾಡಿಕೊಂಡಿದ್ದು, ಸುಲಭವಾಗಿ ಹಣ ಗಳಿಸಲು ಒಂದು ವಾರದ ಹಿಂದೆಯೇ ಒಟ್ಟಾಗಿ ಸೇರಿ ಶ್ರೀಮಂತರ ಮಕ್ಕಳನ್ನು ಅಪಹರಿಸಿ ಹಣ ಗಳಿಸಲು ಮುಂದಾಗಿದ್ದರು.
ಅದರಂತೆ ಸಂಚು ರೂಪಿಸಿ ಶ್ರೀಮಂತರ ಮನೆಯ ರಫೀದ್ ಹರಾಫತ್‌ನ ಮಾಹಿತಿ ಸಂಗ್ರಹಿಸಿ ಆತ ಶಿಕ್ಷಣ ಸಂಸ್ಥೆಯ ಮಾಲೀಕನ ಮಗನೆಂದು ತಿಳಿದು ಅಪಹರಿಸಲು ಮುಂದಾಗಿದ್ದರು. ಅದರಂತೆ ಕೃತ್ಯಕ್ಕೂ ೨ ದಿನಗಳ ಮುಂದೆ ಅಪಹರಣ ನಡೆಸಲು ಪ್ರಯತ್ನಿಸಿ ವಿಫಲರಾಗಿ, ಮಾ. ೨೫ ರಂದು ಯುವಕನನ್ನು ಸ್ನೇಹಿತನ ಮೂಲಕ ಕರೆ ಮಾಡಿ ಕರೆಸಿಕೊಂಡು ರಿಂಗ್ ರಸ್ತೆಯಲ್ಲಿ ಸುತ್ತಾಡುತ್ತ ೨ ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟು ನಂತರ ಆವಲಹಳ್ಳಿ ಯರ್ರಪ್ಪನ ಹಳ್ಳಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಒತ್ತೆ ಇಟ್ಟುಕೊಂಡಿದ್ದರು.
ಕಾರು ಖರೀದಿ
ಯುವಕನನ್ನು ಅಪಹರಿಸಲು ಆರೋಪಿ ಅಬ್ದುಲ್ ಪಹಾದ್ ಹಾಗೂ ಇತರರು ಮಾರುತಿ-೮೦೦ ಕಾರನ್ನು ಓಎಲ್‌ಎಕ್ಸ್‌ನಲ್ಲಿ ಖರೀದಿಸಿ ಅಪಹರಣ ಮಾಡಿದ್ದರು. ಅಪಹರಣದ ಬೆನ್ನು ಬಿದ್ದ ಪೊಲೀಸರಿಗೆ ಆರೋಪಿಗಳು ನಗರದ ಸುತ್ತಮುತ್ತ ಕಾರಿನಲ್ಲಿಯ ಸುತ್ತುತ್ತಿರುವುದಾಗಿ ತಿಳಿಸಿ ಯುವಕನ ಪೋಷಕರು ಹಣ ತಲುಪಿಸಿದರೆ ಯುವಕನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಮುಂದಾಗಿದ್ದರು.
ಪ್ರಕರಣದ ಬೆನ್ನತ್ತಿದ ವಿಶೇಷ ತಂಡಗಳು ಸಿಸಿ ಟಿವಿ ದೃಶ್ಯಾವಳಿಗಳು, ಕಾರು ಖರೀದಿಯ ಮಾಹಿತಿ ಸಂಗ್ರಹಿಸಿ ತಂತ್ರಜ್ಞಾನದ ನೆರವು ಪಡೆದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಡಿಸಿಪಿ ಡಾ. ಶರಣಪ್ಪ ಅವರಿದ್ದರು.