ಯುವಕನೊಬ್ಬನಿಗೆ ದುಬಾರಿ ದಂಡ

ಕಡಬ, ಮೇ.೧- ಮಾಸ್ಕ್ ಧರಿಸಿಲ್ಲವೆಂದು ೧೦೦ ರೂ. ದಂಡ ವಿಧಿಸಿದ್ದಕ್ಕೆ ಕೋವಿಡ್ ಕಾರ್ಯಪಡೆಯ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಉಪ್ಪಿನಂಗಡಿಯ ಯುವಕನೊಬ್ಬ ದುಬಾರಿ ದಂಡ ನೀಡಿ ತೆರಳಿದ ಘಟನೆ ಕಡಬದಲ್ಲಿ ನಡೆದಿದೆ
ಬೈಕಿನಲ್ಲಿ ಹೆಲ್ಮೆಟ್ ಧರಿಸದೆ ಕಡಬಕ್ಕೆ ಆಗಮಿಸಿದ ಉಪ್ಪಿನಂಗಡಿಯ ಇರ್ಷಾದ್ ಎಂಬಾತ ಮಾಸ್ಕ್ ಧರಿಸದೆ ಕಡಬದ ಪೆಟ್ರೋಲ್ ಬಂಕ್ ವೊಂದರಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದ ವೇಳೆ ಕೋವಿಡ್ ಕಾರ್ಯಪಡೆಯ ಅಧಿಕಾರಿ ಹರೀಶ್ ಬೆದ್ರಾಜೆಯವರ ತಂಡ ತಡೆದು ನಿಲ್ಲಿಸಿ ೧೦೦ ರೂ. ದಂಡ ವಿಧಿಸಿದ್ದಾರೆ. ಈ ವೇಳೆ ಯುವಕ ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿದ್ದಲ್ಲದೆ, ಉಡಾಫೆಯಿಂದ ಮಾತನಾಡಿ ತೆರಳುವುದರಲ್ಲಿದ್ದ. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಕಡಬ ಎಸ್‌ಐ ರುಕ್ಮನಾಯ್ಕ್ ಬೈಕನ್ನು ವಶಪಡಿಸಿಕೊಂಡು ಠಾಣೆಗೆ ತಂದಿದ್ದಾರೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ, ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಸೇರಿದಂತೆ, ೨೫೦೦ ರೂ. ದಂಡ ವಿಧಿಸಿದ್ದಾರೆ. ಕೇವಲ ೧೦೦ ರೂ. ಕೊಟ್ಟು ತೆರಳುವುದನ್ನು ಬಿಟ್ಟು ತನ್ನ ಅಹಂಕಾರದಿಂದಾಗಿ ೨೫೦೦ ರೂ. ದಂಡ ಪಾವತಿಸಿ ತೆರಳುವಂತಾಗಿದೆ.
ಮೂರು ದಿನಗಳ ಹಿಂದೆ ಮರ್ಧಾಳದಲ್ಲಿ ನಾಲ್ವರು ಯುವಕರು ಕೋವಿಡ್ ಕಾರ್ಯಪಡೆಯೊಂದಿಗೆ ವಾಗ್ವಾದಕ್ಕೆ ಇಳಿದು ಕಾನೂನು ಉಲ್ಲಂಘನೆ ಮಾಡಿ ಪೋಲೀಸರಿಂದ ಲಾಟಿ ರುಚಿ ತಿಂದ ಘಟನೆ ನಡೆದಿದ್ದು, ಮತ್ತೆ ಮತ್ತೆ ಕೆಲವು ಯುವಕರು ಕಾನೂನು ಉಲ್ಲಂಘನೆ ಮಾಡುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇಂತಹವರ ವಿರುದ್ಧ ಪೋಲೀಸರು ನಿಗಾ ಇಟ್ಟಿದ್ದಾರೆ.