ಯುರೋಪ್‌ನಲ್ಲಿ ಮತ್ತೆ ಕೊರೊನಾ ಕೇಕೆ

ವಿಯೆನ್ನಾ, ನ.೨೩- ಯುರೋಪ್‌ನ ಹಲವು ರಾಷ್ಟ್ರಗಳಲ್ಲಿ ಇದೀಗ ಕೊರೊನಾ ಅಬ್ಬರ ಮತ್ತೆ ಶುರುವಾಗಿದೆ. ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಆಸ್ಟ್ರಿಯಾದಲ್ಲಿ ಮತ್ತೆ ಸಾರ್ವತ್ರಿಕ ಲಾಕ್‌ಡೌನ್ ಈಗಾಗಲೇ ಘೋಷಿಸಲಾಗಿದ್ದು, ಈ ಮೂಲಕ ಲಸಿಕೆಗೆ ಚಾಲನೆ ನೀಡಿದ ಬಳಿಕ ಪಶ್ಚಿಮ ಯುರೋಪ್‌ನಲ್ಲಿ ಮರು ಲಾಕ್‌ಡೌನ್ ಘೋಷಿಸಿದ ಮೊದಲ ರಾಷ್ಟ್ರವೆಂಬ ಕುಖ್ಯಾತಿಗೆ ಒಳಗಾಗಿದೆ.
ಸದ್ಯ ಯುರೋಪ್‌ನ ಹಲವು ರಾಷ್ಟ್ರಗಳಲ್ಲಿ ಕೊರೊನಾ ಮತ್ತೆ ವೇಗವಾಗಿ ಹರಡುತ್ತಿದ್ದು, ಹೀಗಾಗಿ ಆಸ್ಟ್ರಿಯಾದಲ್ಲಿ ಮತ್ತೆ ಲಾಕ್‌ಡೌನ್ ವಿಧಿಸಲಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿರುವ ಬಾರ್, ಕಾಫಿ ಶಾಪ್ ಸೇರಿದಂತೆ ಹಲವು ಶಾಪ್‌ಗಳನ್ನು ಮುಚ್ಚಲಾಗಿದೆ. ಮುಂದಿನ ದಿನಗಳಲ್ಲಿ ಯುರೋಪ್‌ನ ಇತರೆ ರಾಷ್ಟ್ರಗಳಲ್ಲಿ ಕೂಡ ಲಾಕ್‌ಡೌನ್ ಮಾಡುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ. ಮುಖ್ಯವಾಗಿ ಜರ್ಮನಿಯಲ್ಲಿ ಕೂಡ ಇದೇ ಪರಿಸ್ಥಿತಿ ಇದೆ. ಜರ್ಮನಿಯಲ್ಲೂ ಕೂಡ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಸದ್ಯ ನಾವಿರುವ ಸ್ಥಿತಿಯು ತೀರಾ ಹದಗೆಟ್ಟೆದೆ ಎಂದು ಅಲ್ಲಿನ ನಿರ್ಗಮಿತ ಚಾನ್ಸೆಲರ್ ಆಂಜೆಲಾ ಮಾರ್ಕೆಲ್ ತಿಳಿಸಿರುವುದು ಕೂಡ ಪರಿಸ್ಥಿತಿಗೆ ಹಿಡಿದ ಕೈಗನ್ನಡಿದಂತಿದೆ. ಲಸಿಕೀಕರಣ ಪ್ರಕ್ರಿಯೆಗೆ ವೇಗ ನೀಡುವ ಉದ್ದೇಶದಿಂದ, ಆಸ್ಟ್ರಿಯಾದಲ್ಲಿ ಲಸಿಕೆ ಪಡೆಯದವರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರಾಕರಿಸಲಾಯಿತು. ಆದರೂ ಜನತೆ ಲಸಿಕೆ ಪಡೆಯಲು ಹೆಚ್ಚಿನ ಆಸಕ್ತಿ ತೋರದ ಕಾರಣ ಈಗ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಲಾಗಿದ್ದು, ೧೦ ದಿನದ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಚಾನ್ಸಲರ್ ಅಲೆಕ್ಸಾಂಡರ್ ಷಲೆನ್‌ಬರ್ಗ್ ಘೋಷಿಸಿದ್ದಾರೆ.
ಅಂಗಡಿ, ಹೋಟೆಲ್‌ಗಳು ಹಾಗೂ ಹಬ್ಬದ ಮಾರುಕಟ್ಟೆ ಮುಚ್ಚಲಾಗುವುದು. ಕೆಲಸಕ್ಕೆ ಹೋಗುವವರು, ಅಗತ್ಯ ವಸ್ತುಗಳ ಖರೀದಿಗೆ ತೆರಳುವವರು ಮಾತ್ರ ಮನೆಯಿಂದ ಹೊರಬರಲು ಅವಕಾಶ ನೀಡಲಾಗಿದೆ. ಶಾಲೆಗಳು ಹಾಗೂ ನರ್ಸರಿ ಶಾಲೆಗಳು ತೆರೆದಿರುತ್ತವೆ, ಆದರೆ ಸಾಧ್ಯವಾದರೆ ಮಕ್ಕಳನ್ನು ಮನೆಯಲ್ಲೇ ಇರಿಸಿಕೊಳ್ಳುವಂತೆ ಪೋಷಕರಿಗೆ ಸೂಚಿಸಲಾಗಿದೆ. ಇದು ಅತ್ಯಂತ ಗೊಂದಲದ ಪರಿಸ್ಥಿತಿ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಸ್ಟ್ರಿಯಾ ಸರಕಾರ ಕೊರೊನಾ ಸೋಂಕನ್ನು ನಿಯಂತ್ರಿಸಲಾಗಿದೆ ಎಂಬ ಕಟ್ಟುಕತೆಯನ್ನು ಹೇಳುತ್ತಾ ಬಂದಿದ್ದು , ಮುಂದಿನ ಅಲೆ ಅಪ್ಪಳಿಸಲಿದೆ ಎಂಬ ಎಚ್ಚರಿಕೆಯನ್ನು ನಿರ್ಲಕ್ಷಿಸಿದೆ. ಈಗಿನ ಗೊಂದಲ ನಿರೀಕ್ಷಿತ ಎಂದು ರಾಜಕೀಯ ವಿಶ್ಲೇಷಕ ಥಾಮಸ್ ಹಾಫರ್ ಟೀಕಿಸಿದ್ದಾರೆ. ಆಸ್ಟ್ರಿಯಾದಲ್ಲಿ ಇನ್ನು ಮುಂದೆ ಕಠಿಣ ನಿರ್ಬಂಧ ಜಾರಿಯಾಗದು ಎಂದು ಮೇ ತಿಂಗಳಿನಲ್ಲಿ ಅಂದಿನ ಚಾನ್ಸಲರ್ ಸೆಬಾಸ್ಟಿಯನ್ ಕರ್ಜ್ ಘೋಷಿಸಿದ್ದರು. ಆದರೆ ಲಸಿಕೀಕರಣ ಪ್ರಕ್ರಿಯೆ ನಿಧಾನಗತಿಯಲ್ಲಿ ಮುಂದುವರಿದ ಕಾರಣ ದೇಶದಲ್ಲಿ ಸೋಂಕು ಪ್ರಕರಣ ಕ್ರಮೇಣ ಹೆಚ್ಚುತ್ತಿದೆ. ಅಕ್ಟೋಬರ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದ ನೂತನ ಚಾನ್ಸಲರ್ ಅಲೆಕ್ಸಾಂಡರ್ ಷಲೆನ್ಬರ್ಗ್, ದೇಶದ ಲಸಿಕೀಕರಣ ಪ್ರಮಾಣ ಅತ್ಯಂತ ನಾಚಿಕೆಗೇಡು ಎಂದು ಟೀಕಿಸಿದ್ದರು. ಅಕ್ಟೋಬರ್ ವೇಳೆ ಆಸ್ಟ್ರಿಯಾದಲ್ಲಿ ಲಸಿಕೀಕರಣ ಪ್ರಮಾಣ ೬೬% ಆಗಿದ್ದರೆ, ಫ್ರಾನ್ಸ್‌ನಲ್ಲಿ ಶೇ. ೭೫ ಮಂದಿ ಲಸಿಕೆ ಹಾಕಿಸಿಕೊಂಡಿದ್ದರು. ಈ ಮಧ್ಯೆ, ಕೊರೋನ ವಿರುದ್ಧದ ನಿರ್ಬಂಧಗಳನ್ನು ವಿರೋಧಿಸಿ ಯುರೋಪ್‌ನ ಹಲವು ದೇಶಗಳಲ್ಲಿ ಜನತೆ ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆಸ್ಟ್ರಿಯಾದ ವಿಯೆನ್ನಾದಲ್ಲಿ ಶನಿವಾರ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಸುಮಾರು ೪೦,೦೦೦ ಜನತೆ ಪಾಲ್ಗೊಂಡಿದ್ದರು. ರವಿವಾರ ಲಿಂಝ್ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು ೬೦೦೦ ಜನ ಭಾಗವಹಿಸಿದ್ದರು.