ಯುರೋಪ್‌ನಲ್ಲಿ ಬಿಸಿಗಾಳಿ ತೀವ್ರ

ಲಂಡನ್, ಜು.೨೦- ಈಗಾಗಲೇ ಬಿಸಿಗಾಳಿಯ ಪರಿಣಾಮ ಶೀತ ವಾತಾವರಣಕ್ಕೆ ಹೆಸರಾದ ಯುರೋಪ್‌ನಾದ್ಯಂತ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಅತ್ತ ಬ್ರಿಟನ್‌ನಲ್ಲಿ ಇದೇ ಮೊದಲ ಬಾರಿಗೆ ೪೦ ಡಿಗ್ರಿ ಸೆಲ್ಸಿಯಸ್ ಉಷ್ಣತೆ ತಲುಪಿದ್ದರೆ ಫ್ರಾನ್ಸ್‌ನ ಹಲವೆಡೆ ಉಷ್ಣತೆ ದಾಖಲೆ ಮಟ್ಟಕ್ಕೇರಿದೆ. ಅಲ್ಲದೆ ಯುರೋಪ್‌ನ ಹಲವೆಡೆ ಕಾಡ್ಗಿಚ್ಚು ಸಂಭವಿಸಿದ್ದು, ಸಾವಿನ ಪ್ರಕರಣ ಕೂಡ ವರದಿಯಾಗಿದೆ.


ಬಿಸಿಗಾಳಿಯ ಪರಿಣಾಮ ಲಂಡನ್ ಸಮೀಪದ ಗ್ರಾಸ್‌ಲ್ಯಾಂಡ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಹಲವು ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗಿದೆ.
ಘಟನೆ ಹಿನ್ನೆಲೆಯಲ್ಲಿ ೧೪ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹಲವು ಕಟ್ಟಡಗಳು, ಗ್ಯಾರೇಜ್ ಸೇರಿದಂತೆ ಹಲವು ಕಟ್ಟಡಗಳು ಅಗ್ನಿಗಾಹುತಿಯಾಗಿದೆ.
ಈ ನಡುವೆ ಪೂರ್ವ ಇಂಗ್ಲೆಂಡ್‌ನ ಕೋನಿಂಗ್ಸ್‌ಬೈನಲ್ಲಿ ಗರಿಷ್ಠ ೪೦.೩ ಡಿಗ್ರಿ ಸೆಲ್ಟಿಯಸ್ ಉಷ್ಣತೆ ದಾಖಲಾಗಿದೆ ಎಂದು ಹವಾಮಾನ ಕಚೇರಿ ಹೇಳಿದೆ. ಬ್ರಿಟನ್‌ನ ಕನಿಷ್ಠ ೩೪ಕ್ಕೂ ಅಧಿಕ ಸ್ಥಳಗಳಲ್ಲಿ ೨೦೧೯ರಲ್ಲಿ ಪೂರ್ವ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿ ಸ್ಥಾಪಿಸಲಾದ ಹಿಂದಿನ ೩೮.೭ ಡಿಗ್ರಿ ಸೆಲ್ಸಿಯಸ್ ಹಿಂದಿನ ದಾಖಲೆಯನ್ನು ಮೀರಿಸಿವೆ.


ದಿನದಿಂದ ದಿನಕ್ಕೆ ಬಿಸಿತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಹಲವೆಡೆ ಮುನ್ನೆಚ್ಚರಿಕೆಯಾಗಿ ಕೆಲವು ರೈಲು ಮಾರ್ಗಗಳನ್ನು ಮುಚ್ಚಲಾಗಿದೆ ಮತ್ತು ಕೆಲವು ಪ್ರದೇಶಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.
ಅಲ್ಲದೆ ರೈಲ್ವೇಯ ಪ್ರಮುಖ ಜಂಕ್ಷನ್‌ಗಳಲ್ಲಿ ಒಂದಾಗಿರುವ ಲಂಡನ್‌ನಿಂದ ಹೊರಡುವ ಕೆಲವು ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಅತ್ತ ಫ್ರಾನ್ಸ್‌ನ ೬೪ ವಿವಿಧ ಪ್ರದೇಶಗಳಲ್ಲಿ ದಾಖಲೆ ಮಟ್ಟದ ಹೆಚ್ಚಿನ ತಾಪಮಾನವನ್ನು ದಾಖಲಿಸಿವೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ದೃಢಪಡಿಸಿದೆ, ಅವುಗಳಲ್ಲಿ ಹೆಚ್ಚಿನವು ಪಶ್ಚಿಮ ಅಟ್ಲಾಂಟಿಕ್ ಕರಾವಳಿಯಲ್ಲಿ ೪೦ ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ಎಂದು ತಿಳಿಸಲಾಗಿದೆ.
ಅಲ್ಲದೆ ನೆದರ್ಲೆಂಡ್, ಪೋರ್ಚುಗಲ್ ಸೇರಿದಂತೆ ಯುರೋಪ್‌ನ ಹಲವೆಡೆ ಬಿಸಿಗಾಳಿಯ ಪರಿಣಾಮ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.