ಪ್ಯಾರಿಸ್, ಸೆ.೩೦- ಒಂದು ಸಮಯದಲ್ಲಿ ತಣ್ಣನೆಯ ಪ್ರದೇಶವೆಂದೇ ಗುರುತಿಸಿಕೊಂಡಿದ್ದ ಪಾಶ್ಚಿಮಾತ್ಯ ದೇಶಗಳಲ್ಲಿ ಸದ್ಯ ಹವಾಮಾನ ವೈಪರಿತ್ಯದ ಪರಿಣಾಮ ತಾಪಮಾನದಲ್ಲಿ ಏರಿಕೆಯಾಗುತ್ತಿದೆ. ಅದೂ ಅಲ್ಲದೆ ಫ್ರಾನ್ಸ್, ಜರ್ಮನಿ, ಸ್ವಿಟ್ಝರ್‌ಲ್ಯಾಂಡ್, ಪೋಲೆಂಡ್ ಹಾಗೂ ಆಸ್ಟ್ರಿಯಾ ದೇಶಗಳು ಇದೀಗ ಸೆಪ್ಟೆಂಬರ್‌ನಲ್ಲಿ ಅತ್ಯುನ್ನತ ತಾಪಮಾನ ಪ್ರಮಾಣವೆಂದು ಘೋಷಿಸಿದೆ.
ಪ್ರಸಕ್ತ ವರ್ಷದಲ್ಲಿ ಹವಾಮಾನ ಬದಲಾವಣೆಯ ಪರಿಣಾಮ ತಾಪಮಾನ ವೇಗವಾಗುತ್ತಿದ್ದಂತೆ ಮಾನವ ಇತಿಹಾಸದಲ್ಲಿ ಅತ್ಯಂತ ಬೆಚ್ಚಗಿನ ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಲಾಗಿದೆ. ಉತ್ತರ ಗೋಳಾರ್ಧದ ಬೇಸಿಗೆಯಲ್ಲಿ ಜಾಗತಿಕ ತಾಪಮಾನವು ದಾಖಲೆಯ ಮೇಲೆ ಅತಿ ಹೆಚ್ಚು ಎಂದು ಯುರೋಪಿಯನ್ ಯೂನಿಯನ್‌ನ ಹವಾಮಾನ ವಿಶ್ಲೇಷನ ಸಂಸ್ಥೆಯು ಈ ತಿಂಗಳ ಆರಂಭದಲ್ಲಿ ಹೇಳಿತ್ತು. ಅಲ್ಲದೆ ಅದೇ ರೀತಿ ಯುರೋಪ್‌ನಲ್ಲಿ ಅಸಮಂಜಸವಾದ ಬೆಚ್ಚನೆಯ ಹವಾಮಾನದಿಂದ ಜನತೆ ಸಂಕಷ್ಟಕ್ಕೀಡಾಗಿದ್ದರು. ಅದರಲ್ಲೂ ಫ್ರಾನ್ಸ್‌ನಲ್ಲಿನ ಸರಾಸರಿ ತಾಪಮಾನವು ಸುಮಾರು ಎರಡು ವರ್ಷಗಳಿಂದ ಸ್ಥಿರವಾಗಿ ಮಾಸಿಕ ಮಾನದಂಡಗಳನ್ನು ಕೂಡ ಮೀರಿದೆ. ಅಲ್ಲದೆ ನೆರೆಯ ಜರ್ಮನಿಯಲ್ಲಿ, ಹವಾಮಾನ ಕಚೇರಿಯು, ಈ ತಿಂಗಳು ರಾಷ್ಟ್ರೀಯ ದಾಖಲೆಗಳು ಪ್ರಾರಂಭವಾದಾಗಿನಿಂದ ಅತ್ಯಂತ ಬಿಸಿಯಾದ ಸೆಪ್ಟೆಂಬರ್ ಎಂದು ಘೋಷಿಸಿದೆ. ಇದು ೧೯೬೧-೧೯೯೦ ನಡುವಿನ ಹೋಲಿಕೆ ಮಾಡಿದರೆ ಸುಮಾರು ೪ ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ. ಪೋಲೆಂಡ್‌ನ ಹವಾಮಾನ ಸಂಸ್ಥೆಯು ಸೆಪ್ಟೆಂಬರ್‌ನ ತಾಪಮಾನವು ಸರಾಸರಿಗಿಂತ ೩.೬ ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ಘೋಷಿಸಿತು. ಈ ಮೂಲಕ ಕಳೆದ ೧೦೦ ವರ್ಷಗಳ ಹಿಂದೆ ದಾಖಲೆಗಳು ಪ್ರಾರಂಭವಾದಾಗಿನಿಂದ ಪ್ರಸಕ್ತ ಸೆಪ್ಟೆಂಬರ್ ತಿಂಗಳ ತಾಪಮಾನ ಅಧಿಕವಾಗಿತ್ತು ಎಂದು ತಿಳಿಸಿದೆ. ಅಲ್ಲದೆ ಆಲ್ಪೈನ್ ಪರ್ವತ ಶ್ರೇಣಿಗಳ ರಾಷ್ಟ್ರಗಳಾದ ಆಸ್ಟ್ರಿಯಾ ಮತ್ತು ಸ್ವಿಟ್ಜರ್‌ಲ್ಯಾಂಡ್‌ಗಳಲ್ಲಿನ ರಾಷ್ಟ್ರೀಯ ಹವಾಮಾನ ಸಂಸ್ಥೆಗಳು ಕೂಡ ಸೆಪ್ಟೆಂಬರ್‌ನಲ್ಲಿ ಅತಿ ಹೆಚ್ಚು ಸರಾಸರಿ ತಾಪಮಾನವನ್ನು ದಾಖಲಿಸಿವೆ ಎಂದು ತಿಳಿಸಿದೆ. ಒಟ್ಟಿನಲ್ಲಿ ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ತಾಪಮಾನ ಪ್ರಮಾಣ ಏರಿಕೆಯಾಗುತ್ತಿರುವುದು ಸಹಜವಾಗಿಯೇ ಆತಂಕಕಾರಿ ಪರಿಸ್ಥಿತಿ ಎನ್ನಲಾಗಿದೆ.