ಯುರೋಪ್‌ನಲ್ಲಿ ಕಾಡ್ಗಿಚ್ಚಿನ ಅಬ್ಬರ: ಭಾರೀ ಅರಣ್ಯನಾಶ

ಅಥೆನ್ಸ್ (ಗ್ರೀಸ್), ಜು.೨೧- ಕಂಡು ಕೇಳರಿಯದ ಬಿಸಿಗಾಳಿಗೆ ತತ್ತರಿಸಿರುವ ಯುರೋಪ್‌ನಲ್ಲಿ ಸದ್ಯ ಮತ್ತೊಂದು ಸಂಕಷ್ಟ ಎದುರಾಗಿದೆ. ಮಿತಿಮೀರಿದ ಬಿಸಿಗಾಳಿಯ ಪರಿಣಾಮ ಯುರೋಪ್‌ನ ದಕ್ಷಿಣ ಭಾಗದ ಹಲವು ಭಾಗಗಳಲ್ಲಿ ಕಾಡ್ಗಿಚ್ಚು ಹೆಚ್ಚಾಗಿದ್ದು ನಾಗರಿಕರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಾಡ್ಗಿಚ್ಚಿನ ಅಬ್ಬರಕ್ಕೆ ಸಿಲುಕಿರುವ ನಾಗರಿಕರ ಸ್ಥಳಾಂತರ ಕಾರ್ಯ ಸದ್ಯ ಚುರುಕಿನಿಂದ ಸಾಗಿದೆ.
ಈ ನಡುವೆ ಇಟಲಿಯ ಲುಕ್ಕಾದ ಟುಸ್ಕಾನ್ ಪ್ರಾಂತ್ಯದಲ್ಲಿ ಕಾಡ್ಗಿಚ್ಚಿನ ಪರಿಣಾಮ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿದ್ದು, ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಉತ್ತರ ಅಥೆನ್ಸ್‌ನಲ್ಲಿ ಕೂಡ ಬಿರುಗಾಳಿಯಿಂದ ಕೂಡ ಕಾಡ್ಗಿಚ್ಚು ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ ವಾರ ೪೦ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಶಾಖದ ಅಲೆಯು ದಕ್ಷಿಣ ಯುರೋಪ್‌ನಲ್ಲಿ ಜನಜೀವನವನ್ನೇ ಅಸ್ತವ್ಯಸ್ಥಗೊಳಿಸಿದ್ದು, ಇದು ಜಾಗತಿಕ ತಾಪಮಾನದ ಏರಿಕೆಯ ಒಂದು ಭಾಗವಾಗಿದೆ. ಇದಕ್ಕೆ ವಿಜ್ಞಾನಿಗಳು ಮತ್ತು ಹವಾಮಾನಶಾಸ್ತ್ರಜ್ಞರು ಮಾನವ ಚಟುವಟಿಕೆಯೇ ಕಾರಣ ಎಂದು ತಿಳಿಸಿದ್ದಾರೆ. ಅತ್ತ ಉತ್ತರ ಪೋರ್ಚುಗಲ್‌ನ ಪುರ್ಕಾ ಪುರಸಭೆಯ ವ್ಯಾಪ್ತಿಯಲ್ಲಿ ಭಾರೀ ಕಾಡ್ಗಿಚ್ಚಿನಿಂದಾಗಿ ಕಾಡುಗಳು ಭಾರೀ ಪ್ರಮಾಣದಲ್ಲಿ ನಾಶವಾಗಿದೆ. ೧೨ ಸಾವಿರ ಹೆಕ್ಟೇರ್‌ಗೂ ಅಧಿಕ ಅರಣ್ಯ ನಾಶವಾಗಿದ್ದು, ಸದ್ಯ ಸ್ಥಳದಲ್ಲಿ ೮೦೦ ಅಗ್ನಿಶಾಮಕ ಸಿಬ್ಬಂದಿ ಹಾಗೂ ಆರು ಜಲ ಸಾಗಾಟ ವಿಮಾನಗಳನ್ನು ನಿಯೋಜಿಸಲಾಗಿದೆ. ಮೆಡಿಟರೇನಿಯನ್‌ನ ಕೆಲವು ಭಾಗಗಳಲ್ಲಿ ಕಳೆದ ವಾರದ ದಾಖಲೆಯ ಶಾಖವು ಕಡಿಮೆಯಾಗಿದ್ದರೂ, ಪೋರ್ಚುಗಲ್, ಸ್ಪೇನ್ ಮತ್ತು ಇಟಲಿಯಲ್ಲಿ ಬಿಸಿವಾತಾವರಣ ಮತ್ತಷ್ಟು ಏರಲು ಪ್ರಾರಂಭಿಸಿವೆ.