ಯುರೋಪಿಯನ್ ರಾಷ್ಟ್ರಗಳಿಗೆ ಲಸಿಕೆ ಪೂರೈಸಿ: ಆಸ್ಟ್ರಾಝೆನೆಕಾಗೆ ಉರ್ಸುಲಾ ಎಚ್ಚರಿಕೆ

ಲಂಡನ್, ಮಾ.೨೬- ಒಂದು ಕಡೆ ಭಾರತ ತನ್ನ ವಾಕ್ಸಿನ್ ಮೈತ್ರಿ ಯೋಜನೆಯ ಮೂಲಕ ಇಡೀ ವಿಶ್ವಕ್ಕೆ ಉಚಿತವಾಗಿ ಕೊರೊನಾ ಲಸಿಕೆ ನೀಡುತ್ತಿದ್ದರೆ ಅತ್ತ ಯುರೋಪಿಯನ್ ಯೂನಿಯನ್ ಮಾತ್ರ ಒಂದರ್ಥದಲ್ಲಿ ಸ್ವಾರ್ಥದ ರೀತಿಯಲ್ಲಿ ಇದಕ್ಕೆ ತದ್ವಿರುದ್ಧ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಸದ್ಯ ಯುರೋಪಿಯನ್ ಸಮಿತಿಯ ಅಧ್ಯಕ್ಷೆ ಉರ್ಸುಲಾ ವೊನ್ ಡರ್ ಲೆಯೆನ್ ವಾಕ್ಸಿನ್ ತಯಾರಿಕಾ ಸಂಸ್ಥೆ ಆಸ್ಟ್ರಾಝೆನೆಕಾಗೆ ಎಚ್ಚರಿಕೆ ನೀಡಿದ್ದು, ಮೊದಲು ಯುರೋಪಿಯನ್ ರಾಷ್ಟ್ರಗಳಿಗೆ ವಾಕ್ಸಿನ್ ನೀಡುವಂತೆ ಆಗ್ರಹಿಸಿದ್ದಾರೆ.
ಯುರೋಪಿಯನ್ ಯೂನಿಯನ್‌ನ ರಾಷ್ಟ್ರಗಳಿಗೆ ಪೂರೈಸುವ ಒಪ್ಪಂದವನ್ನು ಆಸ್ಟ್ರಾಝೆನೆಕಾ ಮೊದಲು ಗೌರವಿಸಿ, ಲಸಿಕೆ ಪುರೈಸಬೇಕಿದೆ. ಆ ನಂತರವೇ ಉಳಿದ ರಾಷ್ಟ್ರಗಳಿಗೆ ಸರಬರಾಜು ಮಾಡಬಹುದು. ಮೊದಲು ನಮ್ಮ ಯುರೋಪಿಯನ್ ನಾಗರಿಕರಿಗೆ ಲಸಿಕೆ ಲಭಿಸಬೇಕು ಎಂದು ಉರ್ಸುಲಾ ಗಂಭೀರ ರೀತಿಯಲ್ಲಿ ಆಸ್ಟ್ರಾಝೆನೆಕಾ ಕಂಪೆನಿಗೆ ತಿಳಿಸಿದ್ದಾರೆ. ಆರಂಭಿಕ ಹಂತದಲ್ಲಿ ಯುರೋಪಿಯನ್ ಯೂನಿಯನ್ ಜೊತೆ ಮಾಡಿಕೊಂಡ ಒಪ್ಪಂದನ್ವಯ ಸೂಕ್ತ ರೀತಿಯಲ್ಲಿ ಲಸಿಕೆ ಪೂರೈಸದ ಆರೋಪದ ಹಿನ್ನೆಲೆಯಲ್ಲಿ ಆಸ್ಟ್ರಾಝೆನೆಕಾ ಕಂಪೆನಿಯ ಲಸಿಕೆಗಳ ಬಳಕೆಗೆ ತಡೆ ಹಿಡಿದಿತ್ತು. ನಂತರ ಯುಕೆ ಹಾಗೂ ಯುರೋಪಿಯನ್ ಯೂನಿಯನ್ ನಡುವಿನ ಮಾತುಕತೆಯ ನಂತರ ಪರಿಸ್ಥಿತಿ ತಿಳಿಗೊಂಡಿತ್ತು.