ಯುಪಿಎಸ್ ಸಿ ಫಲಿತಾಂಶ ಪ್ರಕಟ ಇಶಿತಾಗೆ ಮೊದಲ ಸ್ಥಾನ, ಅವಿನಾಶ್ ರಾಜ್ಯಕ್ಕೆ ಪ್ರಥಮ

ನವದೆಹಲಿ,‌ಮೇ.23- ಪ್ರಸಕ್ತ ಸಾಲಿನ ನಾಗರಿಕ ಸೇವಾ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಇಶಿತಾ ಕಿಶೋರ್ ಮೊದಲ ಸ್ಥಾನ ಗಳಿಸಿದ್ದಾರೆ.
ಗರಿಮಾ ಲೋಹಿಯಾ, ಉಮಾ ಹರಿತಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿ ಒಟ್ಟು 933 ಅಭ್ಯರ್ಥಿಗಳು ನೇಮಕಾತಿಗೆ ಆಯ್ಕೆಯಾಗಿದ್ದಾರೆ. ಈ ಪೈಕಿ 345 ಅಭ್ಯರ್ಥಿಗಳು ಮೀಸಲಾತಿ ರಹಿತ, 99 ಇಡಬ್ಲ್ಯೂಎಸ್, 263 ಒಬಿಸಿ, 154 ಎಸ್‌ಸಿ ಮತ್ತು 72 ಎಸ್‌ಟಿ ವರ್ಗದವರು. 178 ಅಭ್ಯರ್ಥಿಗಳ ಮೀಸಲು ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಐಎಎಸ್ ಹುದ್ದೆಗಳ ಆಯ್ಕೆಗೆ 180 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ.

ಕಳೆದ ವರ್ಷ, ಶ್ರುತಿ ಶರ್ಮಾ ಅವರು ಯುಪಿಎಸ್ ಸಿ, ಸಿಎಸ್ ಇ 2021 ಪರೀಕ್ಷೆಯಲ್ಲಿ ಅಖಿಲ ಭಾರತ ಪರೀಕ್ಷೆಯಲ್ಲಿ ನಂಬರ್​ ಒನ್​ ಸ್ಥಾನ ಗಳಿಸಿದ್ದರು. ಈ ಬಾರಿ ಎಲ್ಲಾ ಮೊದಲ ಮೂರು ರ‍್ಯಾಂಕ್​ಗಳನ್ನು ಮಹಿಳೆಯರೇ ಪಡೆದುಕೊಂಡಿದ್ದಾರೆ.

ರಾಜ್ಯಕ್ಕೆ ಪ್ರಥಮ


ಯುಪಿಎಸ್ಸಿ ಪರೀಕ್ಷೆಯಲ್ಲಿ ದಾವಣಗೆರೆಯ ಅವಿನಾಶ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಗಳಿಸಿದ್ದಾರೆ.
ಆಯ್ಕೆಯಾಗಿರುವ ಒಟ್ಟು 933 ಅಭ್ಯರ್ಥಿಗಳ ಪೈಕಿ ಕರ್ನಾಟಕದ 26 ಅಭ್ಯರ್ಥಿಗಳಿದ್ದಾರೆ.
ಮೊದಲ ಪ್ರಯತ್ನದಲ್ಲಿಯೇ ದಾವಣಗೆರೆ ಮೂಲದ ಅವಿನಾಶ್‌ ವಿ. 31ನೇ ರ‍್ಯಾಂಕ್‌ ಪಡೆದು ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಅವಿನಾಶ್ ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡಾದವರಾದ ಶೃತಿ ಯರಗಟ್ಟಿ 362ನೇ ರ‍್ಯಾಂಕ್‌
, ಬಿವಿ ಶ್ರೀದೇವಿಗೆ 525ನೇ ರ‍್ಯಾಂಕ್‌, ಆದಿನಾಥ್ ಪದ್ಮಣ್ಣಗೆ 566ನೇ ರ್ಯಾಂಕ್, ಐಎನ್ ಮೇಘನಾ 617ನೇ ರ‍್ಯಾಂಕ್‌ ಪಡೆದಿದ್ದಾರೆ.