ಯುಪಿಎಸ್ಸಿಯಲ್ಲಿ 115ನೇ ಸ್ಥಾನ ಯತೀಶ್ ಗೆ ಡಿಕೆಶಿ ಅಭಿನಂದನೆ

ಬೆಂಗಳೂರು,ಸೆ.25-ಕಳೆದ 2020ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ನಾಗರಿಕಾ ಸೇವಾ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಹಾಗೂ ದೇಶದಲ್ಲಿ 115ನೇ ಸ್ಥಾನ ಪಡೆದಿರುವ ಕನಕಪುರದ ಯತೀಶ್. ಆರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಕನಕಪುರದ ಯತೀಶ್.ಆರ್ ಅವರು ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ, ನಮ್ಮ ತಾಲೂಕು ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಭವಿಷ್ಯದಲ್ಲಿ ದೇಶ ಸೇವೆಯ ಅಮೂಲ್ಯ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜನರ ಹಿತಕ್ಕಾಗಿ ಶ್ರಮಿಸಲಿ ಎಂದು ಅವರು ಹಾರೈಸಿದ್ದಾರೆ.ಮೂಲತಃ ಇಂಜಿನಿಯರ್ ಪದವಿ ಮಾಡಿರುವ ಯತೀಶ್ 2017 ರಿಂದ ಯುಪಿಎಸ್​​ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಎಂದು ತಿಳಿಯಿತು. ಅವರ ಸುದೀರ್ಘ ಪರಿಶ್ರಮಕ್ಕೆ ಈಗ ತಕ್ಕ ಪ್ರತಿಫಲ ಸಿಕ್ಕಿದೆ. ಅವರ ಮುಂದಿನ ವೃತ್ತಿ ಜೀವನ ಯಶಸ್ವಿಯಾಗಲಿ. ಅವರ ಸೇವೆಯಿಂದ ಜನರಿಗೆ ಒಳಿತಾಗಲಿ.ಯತೀಶ್ ಅವರ ಸಾಧನೆ ಯುವ ಸಮುದಾಯಕ್ಕೆ ಸ್ಪೂರ್ತಿ ತಂದಿದೆ. ಇವರಿಂದ ಮತ್ತಷ್ಟು ಯುವಕರು ಪ್ರೇರಿತರಾಗಿ ಯುಪಿಎಸ್​​ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲಿ. ರಾಜ್ಯ ಹಾಗೂ ದೇಶಕ್ಕೆ ಉತ್ತಮ ಹೆಸರು ತರಲಿ ಎಂದು ಡಿಕೆಶಿ ಹಾರೈಸಿದ್ದಾರೆ.ಕನಕಪುರದ ರಾಧಾಕೃಷ್ಣ ಮತ್ತು ರಜನಿ ದಂಪತಿ ಪುತ್ರರಾದ ಯತೀಶ್ ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ವಿಷಯದಲ್ಲಿ ಪದವಿ ಪಡೆದು 2019 ರಲ್ಲಿ ಐಪಿಎಸ್​​ಗೆ ಆಯ್ಕೆಯಾಗಿದ್ದರು. ಇದೀಗ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಡಿ.ಕೆ ಸುರೇಶ್ ಅಭಿನಂದನೆ:ಸಂಸದ ಡಿ.ಕೆ ಸುರೇಶ್ ಟ್ವೀಟ್ ಮಾಡಿ ಅಭಿನಂದಿಸಿದ್ದು, 2020ನೇ ಸಾಲಿನ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಮ್ಮ ರಾಜ್ಯದ 18 ಅಭ್ಯರ್ಥಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಸಾರ್ವಜನಿಕ ಬದುಕಿನಲ್ಲಿ ದಾಖಲಾರ್ಹ ಮತ್ತು ಕನ್ನಡ ನಾಡಿನ ಗರಿಮೆಯನ್ನು ಮತ್ತಷ್ಟು ಎತ್ತಿಹಿಡಿಯುವ ಕೆಲಸಗಳು ನಿಮ್ಮಿಂದ ಆಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.