ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಹೊಯ್ಸಳ ದೇವಾಲಯ

ರಾಜ್ಯಕ್ಕೆ ಮತ್ತೊಂದು ಗರಿ

ನವದೆಹಲಿ, ಸೆ.೧೯-ಅತ್ಯಂತ ಶ್ರೀಮಂತ, ವಾಸ್ತುಶಿಲ್ಪ ಕಲೆಗಳನ್ನು ಮೈಗೂಡಿಸಿಕೊಂಡಿರುವ ಹೊಯ್ಸಳ ಕಾಲದ ದೇವಾಲಯಗಳು ಯುನೆಸ್ಕೋ ವಿಶ್ವಪಾರಂಪರಿಕ ತಾಣದ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.ಹಾಸನ ಜಿಲ್ಲೆಯ ಬೇಲೂರಿನ ಚನ್ನಕೇಶವ ದೇವಾಲಯ, ಹಳೇಬೀಡು, ಮೈಸೂರಿನ ಸೋಮನಾಥಪುರದಲ್ಲಿರುವ ಹೊಯ್ಸಳ ದೇವಾಲಯಗಳಿಗೆ ಈ ಸಥಾನ ಪ್ರಾಪ್ತವಾಗಿದ್ದು, ಇದರೊಂದಿಗೆ ಭಾರತದ ೪೨ ತಾಣಗಳಿಗೆ ಆಂತಾರಾಷ್ಟ್ರೀಯ ಮನ್ನಣೆ ಸಿಕ್ಕಂತಾಗಿದೆ.ಈ ಕುರಿತು ಟ್ವೀಟ್ ಮಾಡಿರುವ ಯುನೆಸ್ಕೋ, ಭಾರತಕ್ಕೆ ಅಭಿನಂದನೆಗಳು, ಹೊಯ್ಸಳ ವಿಶಿಷ್ಠ ಹಾಗೂ ವಿಶೇಷ ವಾಸ್ತುಶಿಲ್ಪದ ಕೆತ್ತನೆಗಳು ಇದೀಗ ಯುನೆಸ್ಕೋ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಅಚ್ಚೊತ್ತಿದೆ ಎಂದು ಟ್ವೀಟ್ ಮಾಡಿದೆ.೧೨ ರಿಂದ ೧೩ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯಗಳು ವಾಸ್ತುಶಿಲ್ಪಗಳಿಂದಲೇ ವಿಶ್ವವಿಖ್ಯಾತಿಯಾಗಿದೆ. ಕರ್ನಾಟಕದ ಎಲ್ಲಾ ಹೊಯ್ಸಳ ದೇವಾಲಯಗಳನ್ನು ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಣೆ ಮಾಡುತ್ತಿದೆ.ಅತ್ಯಂತ ವಿಶೇಷ ವಾಸ್ತುಶಿಲ್ಪದ ದೇವಾಲಯ ಇದಾಗಿದೆ. ಹೊಯ್ಸಳರು ೧೨ ಮತ್ತು ೧೩ನೇ ಶತಮಾನದಲ್ಲಿ ಕರ್ನಾಟಕವನ್ನು ಆಳಿದ ಪ್ರಮುಖ ರಾಜವಂಶಜರು. ಕಲೆ, ಸಾಹಿತ್ಯ ಮತ್ತು ಪ್ರಮುಖವಾಗಿ ದೇವಾಲಯದ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಿದ್ದಾರೆ.
ಹೊಯ್ಸಳ ದೇವಾಲಯಗಳು ಬಹಳ ಪ್ರಬಲವಾಗಿವೆ. ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದಲ್ಲಿನ ಶಿಲ್ಪಕಲೆಗಳು ಅಪ್ರತಿಮವಾಗಿವೆ. ಸ್ಮಾರಕಗಳ ನಿರ್ಮಾಣಕ್ಕೆ ೧೨೭ ವರ್ಷಗಳ ಕಾಲ ತೆಗೆದುಕೊಂಡಿದ್ದಾರೆ ಅನ್ನೋದು ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಕಲ್ಲಿನ ಕೆತ್ತನೆಗಳು ತುಂಬಾ ಸೂಕ್ಷ್ಮವಾಗಿವೆ.ನಿನ್ನೆ ನಡೆದ ಯುನೆಸ್ಕೋ ಮೊದಲ ಸಭೆಯಲ್ಲಿ ರಾಷ್ಟ್ರಗೀತೆ ಜನಗಣಮನ’ದ ರಚನೆಕಾರ ರವೀಂದ್ರನಾಥ ಠ್ಯಾಗೋರ್ ಸ್ಥಾಪಿಸಿರುವ ಶಾಂತಿನಿಕೇತನ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಿತ್ತು.. ಇದನ್ನು ಖುದ್ದು ಯುನೆಸ್ಕೋ ತನ್ನ ಟ್ವೀಟರ್ ಖಾತೆಯಲ್ಲಿ ಬಹಿರಂಗಪಡಿಸಿತ್ತು. ಇದರಿಂದಾಗಿ ದೇಶದಲ್ಲಿರುವ ಒಟ್ಟು ವಿಶ್ವ ಪಾರಂಪರಿಕ ತಾಣಗಳ ಸಂಖ್ಯೆ ೪೧ಕ್ಕೆ ಏರಿಕೆಯಾಗಿತ್ತು. ಹೊಯ್ಸಳ ದೇವಾಲ ಸೇರ್ಪಡೆಯೊಂದಿಗೆ ಈ ಸಂಖ್ಯೆ ೪೨ಕ್ಕೆ ಏರಿಕೆಯಾಗಿದೆ.

ಪ್ರಧಾನಿ ಸಂತಸ
ಈ ಕುರಿತು ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಹೊಯ್ಸಳರ ಭವ್ಯವಾದ ಪವಿತ್ರ ದೇವಾಲಯಗಳು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಹೊಯ್ಸಳ ದೇವಾಲಯಗಳ ಕಾಲಾತೀತ ಸೌಂದರ್ಯ ಮತ್ತು ಸಂಕೀರ್ಣ ವಿವರಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ಪೂರ್ವಜರ ಅಸಾಧಾರಣ ಕರಕುಶಲತೆಗೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಹೆಮ್ಮೆಯ ಸಂಗತಿ: ಸಿಎಂ
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರುನಾಡಿನ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಕೂಡ.ನಾಡಿನ ಪ್ರವಾಸಿ ತಾಣಗಳಿಗೆ ಭೇಟಿನೀಡುವ ಪ್ರವಾಸಿಗರಿಗೆ ವಿಶ್ವಮಟ್ಟದ ಮೂಲಸೌಲಭ್ಯ ಮತ್ತು ಸುರಕ್ಷತೆ ಒದಗಿಸಲು ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ.ಐತಿಹಾಸಿಕ ಸ್ಥಳಗಳು ಮತ್ತು ಪುಣ್ಯಕ್ಷೇತ್ರಗಳ ತೊಟ್ಟಿಲು ಕರ್ನಾಟಕಕ್ಕೆ ಸ್ವಾಗತ ಎಂದು ಹೇಳಿದ್ದಾರೆ.